‘ಟಾಕ್ಸಿಕ್’ ಟೀಸರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ; ಮಹಿಳಾ ಪಾತ್ರಗಳ ಚಿತ್ರಣಕ್ಕೆ ಆಕ್ಷೇಪ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಹೊಸ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಮಹಿಳಾ ಪಾತ್ರಗಳ ಚಿತ್ರಣ ಮತ್ತು ಕೆಲವು ಸಂಭಾಷಣೆಗಳ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಟೀಸರ್‌ನಲ್ಲೂ ಯಶ್ ಪಾತ್ರವನ್ನು ಒಳಗೊಂಡ ಕೆಲವು ದೃಶ್ಯಗಳು ವಿವಾದಕ್ಕೆ ಕಾರಣವಾಗಿದ್ದವು. ಇದೀಗ ಹೊಸ ಟೀಸರ್‌ನಲ್ಲಿರುವ ಕೆಲವು ದೃಶ್ಯಗಳು ಮತ್ತು ಹಿನ್ನೆಲೆ ನಿರೂಪಣೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ.
ಟೀಸರ್‌ನ ಒಂದು ದೃಶ್ಯದಲ್ಲಿ ಮಹಿಳಾ ಪಾತ್ರವೊಂದು ಯಶ್ ಪಾತ್ರದತ್ತ ಸಾಗುವ ವೇಳೆ ನಡೆಯುವ ಘಟನೆ ಹಾಗೂ ನಂತರ ಕೇಳಿಬರುವ ಹಿನ್ನೆಲೆ ಧ್ವನಿಯಲ್ಲಿನ ಪದಪ್ರಯೋಗದ ವಿರುದ್ಧ ಹಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟರ್) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪ್ರತಿಕ್ರಿಯಿಸಿರುವ ಕೆಲವರು, ಚಿತ್ರದಲ್ಲಿ ಮಹಿಳಾ ಪಾತ್ರಗಳನ್ನು ಕೇವಲ ಆಕರ್ಷಣೆಯ ಸಾಧನವಾಗಿ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಕೆಲವರು ಇದನ್ನು ಲಿಂಗಭೇದದ ದೃಷ್ಟಿಕೋನ ಎಂದು ಟೀಕಿಸಿದ್ದಾರೆ.
ವಿಶೇಷವಾಗಿ ‘ಲೈಯರ್ಸ್ ಡೈಸ್’ ಹಾಗೂ ‘ಮೂತೋನ್’ ಮೊದಲಾದ ಪ್ರಶಂಸಿತ ಚಿತ್ರಗಳನ್ನು ನಿರ್ದೇಶಿಸಿದ್ದ ಗೀತು ಮೋಹನದಾಸ್ ಅವರಿಂದ ಇಂತಹ ನಿರೂಪಣೆ ನಿರೀಕ್ಷಿಸಿರಲಿಲ್ಲ ಎಂದು ಕೆಲ ಸಿನಿಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವು ನೆಟ್ಟಿಗರು, ಚಿತ್ರದ ಹಿನ್ನೆಲೆ ನಿರೂಪಣೆ ಮತ್ತು ಟೀಸರ್‌ನ ನಿರೂಪಣಾ ಶೈಲಿ ಹಳತಾಗಿ ಕಾಣುತ್ತದೆ ಎಂದು ಟೀಕಿಸಿದ್ದಾರೆ. ಕೆಲವು ದೃಶ್ಯಗಳು ಹಿಂದಿನ ದಶಕದ ವಾಣಿಜ್ಯ ಚಿತ್ರಗಳನ್ನು ನೆನಪಿಸುವಂತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಆದರೆ ಮತ್ತೊಂದೆಡೆ, ಟೀಸರ್ ಅನ್ನು ಕೇವಲ ಪ್ರಚಾರದ ಭಾಗವಾಗಿ ಮಾತ್ರ ನೋಡಬೇಕು, ಸಂಪೂರ್ಣ ಸಿನಿಮಾ ಬಿಡುಗಡೆಯಾದ ಬಳಿಕವೇ ಅದರ ಬಗ್ಗೆ ಅಂತಿಮ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತ ಎಂದು ಯಶ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ, ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.


