ಸೇವೆಯಲ್ಲಿರುವ ಶಿಕ್ಷಕರಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತ್ಯೇಕ ಶಿಕ್ಷಕರ ಅರ್ಹತಾ ಪರೀಕ್ಷೆ (TET) ನಡೆಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಯುಪಿಟಿಇಟಿ-2026 (UPTET-2026) ಸಿದ್ಧತೆಗಳ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ಶಿಕ್ಷಣ ಸೇವಾ ಆಯ್ಕೆ ಆಯೋಗಕ್ಕೆ (UP Education Service Selection Commission) ಸೇವೆಯಲ್ಲಿರುವ ಶಿಕ್ಷಕರಿಗಾಗಿ ಪ್ರತ್ಯೇಕ TET ಪರೀಕ್ಷೆ ಆಯೋಜಿಸಲು ಸೂಚನೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ TET ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ, ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಿಗೂ ನೇಮಕಾತಿ ಹಾಗೂ ಬಡ್ತಿಯಲ್ಲಿ ಸಮಾನ ಅವಕಾಶ ದೊರೆಯಬೇಕು. ಕೇವಲ ಅವಕಾಶದ ಕೊರತೆಯಿಂದ ಯಾವುದೇ ಶಿಕ್ಷಕರು ಹಿನ್ನಡೆ ಅನುಭವಿಸಬಾರದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದೇ ವೇಳೆ, UPTET-2026 ಪರೀಕ್ಷೆಯು ಜುಲೈ 3ರಿಂದ 4ರವರೆಗೆ ರಾಜ್ಯದ 60 ಜಿಲ್ಲೆಗಳ 955 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಸುಮಾರು 20 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ 1.85 ಲಕ್ಷ ಮಂದಿ ಸೇವೆಯಲ್ಲಿರುವ ಶಿಕ್ಷಕರು ಸೇರಿದ್ದಾರೆ.
ಪರೀಕ್ಷೆಗೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಗಮಿಸುವ ಹಿನ್ನೆಲೆಯಲ್ಲಿ, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಅಗತ್ಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


