ಒಡಿಶಾದ ಮಯೂರಭಂಜ್ ಜಿಲ್ಲೆ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 68ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ಪ್ರವಾಸ ಕೈಗೊಂಡಿದ್ದು, ಇಬ್ಬರೂ ನಾಯಕರು ಜಿಲ್ಲೆಯ ಪಹಾಡ್‌ಪುರ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪಹಾಡ್‌ಪುರದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಸಂತಾಲಿ ಹಾಗೂ ಹೋ ಸಮುದಾಯಗಳ ಪವಿತ್ರ ಜಹೇರಾ ಸ್ಥಳಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೆ ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ಶಾಲೆಗೆ ಭೇಟಿ ನೀಡಿ, ಆದಿವಾಸಿ ಪ್ರದೇಶಗಳ ಶಿಕ್ಷಣ ಹಾಗೂ ಯುವ ಸಬಲೀಕರಣ ಕಾರ್ಯಕ್ರಮಗಳನ್ನು ಪರಿಶೀಲಿಸಲಿದ್ದಾರೆ.
ನಂತರ ರಾಯರಂಗಪುರದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ, ಒಡಿಶಾ ಸರ್ಕಾರದ ಎರಡು ವರ್ಷದ ಸಾಧನೆಗಳನ್ನು ಗುರುತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ₹47,600 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಲಿದೆ.
ಈ ಯೋಜನೆಗಳು ವಿದ್ಯುತ್, ಕೈಗಾರಿಕಾ ಮೂಲಸೌಕರ್ಯ, ರಸ್ತೆ ಸಂಪರ್ಕ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಮತ್ತು ನೀರಾವರಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ. ಅಪರ್ ಇಂದ್ರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಐಬಿ ಥರ್ಮಲ್ ಪವರ್ ಸ್ಟೇಷನ್ ವಿಸ್ತರಣೆ ಹಾಗೂ ಜಾರ್ಸುಗುಡಾದ ಭಾರತ್ ಕೋಲ್ ಗ್ಯಾಸಿಫಿಕೇಶನ್ ಅಂಡ್ ಕೆಮಿಕಲ್ಸ್ ಲಿಮಿಟೆಡ್ ಯೋಜನೆ ಪ್ರಮುಖ ಆಕರ್ಷಣೆಯಾಗಿವೆ.
ಇದೇ ವೇಳೆ ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಎರಡು ದಿನಗಳ ಪ್ರವಾಸವನ್ನೂ ಆರಂಭಿಸಲಿದ್ದು, ಹೂಘ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಪಶ್ಚಿಮ ಬಂಗಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 23ನೇ ಕಂತನ್ನು ಬಿಡುಗಡೆ ಮಾಡಲಿದ್ದು, ದೇಶದ 9.44 ಕೋಟಿ ರೈತರ ಖಾತೆಗಳಿಗೆ ₹18,880 ಕೋಟಿಗೂ ಅಧಿಕ ಮೊತ್ತ ನೇರವಾಗಿ ಜಮೆಯಾಗಲಿದೆ.
ಜೊತೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಡಿಜಿಟಲ್ ಕೃಷಿ ಮಿಷನ್‌ನ ಅಡಿಯಲ್ಲಿ ಆಗ್ರಿ ಸ್ಟ್ಯಾಕ್, ನ್ಯಾಚುರಲ್ ಫಾರ್ಮಿಂಗ್ ರಾಷ್ಟ್ರೀಯ ಮಿಷನ್ ಹಾಗೂ ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಸೇರಿದಂತೆ ಹಲವು ಕೃಷಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ನಾಳೆ ಕೊಲ್ಕತ್ತಾದಲ್ಲಿ ನಡೆಯುವ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಬಳಿಕ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿತವಾದ INS Dunagiri, INS Sanshodhak ಮತ್ತು INS Agray ನೌಕಾಪಡೆಯ ಹಡಗುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.


