ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಸ್ಲೋವಾಕಿಯಾ ದೇಶಗಳ ಮಹತ್ವದ ಎರಡು ರಾಷ್ಟ್ರಗಳ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಭೇಟಿಯು ಭಾರತದ ಜಾಗತಿಕ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳಿಗೆ ಹೊಸ ಚೈತನ್ಯ ನೀಡಿದೆ.
ಫ್ರಾನ್ಸ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜರ್ಮನಿಯ ಚಾನ್ಸಲರ್ ಫ್ರಿಡ್ರಿಕ್ ಮರ್ಝ್, ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸೇರಿದಂತೆ ಹಲವು ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಫ್ರಾನ್ಸ್‌ನ ನೀಸ್ ನಗರದಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಪ್ರಧಾನಿ ಮೋದಿ ಅವರು ‘ಭಾರತ್ ಇನ್ನೋವೇಟ್ಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾರತ, ಫ್ರಾನ್ಸ್ ಹಾಗೂ ಇತರ ದೇಶಗಳ ಸ್ಟಾರ್ಟ್‌ಅಪ್‌ಗಳು, ನವೋದ್ಯಮಿಗಳು ಮತ್ತು ಹೂಡಿಕೆದಾರರು ಭಾಗವಹಿಸಿದ್ದರು.
ನಂತರ ಸ್ಲೋವಾಕಿಯಾ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ, ರಾಜಧಾನಿ ಬ್ರಾಟಿಸ್ಲಾವಾದಲ್ಲಿ ಸ್ಲೋವಾಕ್ ಗಣರಾಜ್ಯದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಅವರನ್ನು ಭೇಟಿಯಾಗಿ ಉಭಯ ದೇಶಗಳ ಸಹಕಾರ ವೃದ್ಧಿ ಕುರಿತು ಚರ್ಚಿಸಿದರು.
ಈ ವೇಳೆ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ಲೋವಾಕಿಯಾದ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ದ ವೈಟ್ ಡಬಲ್ ಕ್ರಾಸ್ – ಫಸ್ಟ್ ಕ್ಲಾಸ್’ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಇದು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಬಲಿಷ್ಠ ಸ್ನೇಹ ಸಂಬಂಧಗಳ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿಯ ಈ ಪ್ರವಾಸವು ಜಾಗತಿಕ ರಾಜಕೀಯ, ಆರ್ಥಿಕ ಸಹಕಾರ, ತಂತ್ರಜ್ಞಾನ, ಹೂಡಿಕೆ ಹಾಗೂ ನಾವೀನ್ಯತೆ ಕ್ಷೇತ್ರಗಳಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ ಎಂದು ವಿದೇಶಾಂಗ ವಲಯಗಳು ಅಭಿಪ್ರಾಯಪಟ್ಟಿವೆ.


