ಉತ್ತರಾಖಂಡದ ಪಿಥೋರಾಗಢ ಜಿಲ್ಲೆಯ ಲಿಪುಲೆಖ್ ಪಾಸ್ ಮೂಲಕ ಭಾರತ–ಚೀನಾ ಗಡಿ ವ್ಯಾಪಾರವು ಆರು ವರ್ಷಗಳ ವಿರಾಮದ ಬಳಿಕ ಪುನರಾರಂಭವಾಗುತ್ತಿದೆ. ಇದರ ಭಾಗವಾಗಿ 26 ಭಾರತೀಯ ವ್ಯಾಪಾರಿಗಳಿಗೆ ಟ್ರೇಡ್ ಪಾಸ್ಗಳನ್ನು (ವ್ಯಾಪಾರ ಅನುಮತಿ ಪತ್ರ) ವಿತರಿಸಲಾಗಿದ್ದು, ಮೊದಲ ತಂಡವು ನಾಳೆ ಟಿಬೆಟ್ ಪ್ರದೇಶಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ.
ಧಾರ್ಚುಲಾ ಉಪ ವಿಭಾಗಾಧಿಕಾರಿ (ಎಸ್ಡಿಎಂ) ಹಾಗೂ ವ್ಯಾಪಾರ ಅಧಿಕಾರಿ ಅಶೀಷ್ ಜೋಶಿ ಮಾಹಿತಿ ನೀಡಿದ್ದು, ವಿತರಿಸಲಾದ 26 ಪಾಸ್ಗಳಲ್ಲಿ 17 ವ್ಯಾಪಾರಿಗಳು ಮತ್ತು 9 ಸಹಾಯಕರು ಸೇರಿದ್ದಾರೆ. ವ್ಯಾಪಾರ ಪ್ರಕ್ರಿಯೆ ಸುಗಮಗೊಳಿಸಲು ಗುಂಜಿ ಪ್ರದೇಶದಲ್ಲಿ ಕಸ್ಟಮ್ಸ್ ಕಚೇರಿಯನ್ನೂ ತೆರೆಯಲಾಗಿದೆ.
ವ್ಯಾಪಾರಿಗಳು ಈಗಾಗಲೇ ಲಿಪುಲೆಖ್ ಪಾಸ್ ಸಮೀಪದ ಗ್ರಾಮಗಳ ಗೋದಾಮುಗಳಲ್ಲಿ ತಮ್ಮ ಸರಕುಗಳನ್ನು ಸಂಗ್ರಹಿಸಿದ್ದು, ಗಡಿ ವ್ಯಾಪಾರ ಪುನರಾರಂಭಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.
ಇದಲ್ಲದೆ, 103ಕ್ಕೂ ಹೆಚ್ಚು ವ್ಯಾಪಾರಿಗಳಿಂದ ಅರ್ಜಿಗಳು ಬಂದಿದ್ದು, ಶೀಘ್ರದಲ್ಲೇ ಎರಡನೇ ಹಂತದಲ್ಲಿ ಮತ್ತಷ್ಟು 25 ವ್ಯಾಪಾರಿಗಳಿಗೆ ಟ್ರೇಡ್ ಪಾಸ್ ನೀಡಲು ಆಡಳಿತ ಸಿದ್ಧತೆ ನಡೆಸುತ್ತಿದೆ. ಸರಕು ಸಾಗಣೆಗೆ ಅನುಕೂಲವಾಗುವಂತೆ ನಾಭಿಧಾಂಗ್ ಸಮೀಪ ಕುದುರೆ ಮತ್ತು ಹೇಸರಗತ್ತೆಗಳನ್ನು ಬಳಸಲು ವಿಶೇಷ ಸ್ಥಳವನ್ನೂ ಗುರುತಿಸಲಾಗಿದೆ.
ಭಾರತ–ಚೀನಾ ಗಡಿ ವ್ಯಾಪಾರವು 1991ರಲ್ಲಿ ಪುನರಾರಂಭಗೊಂಡಿದ್ದರೂ, 2020ರಲ್ಲಿ ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಆರು ವರ್ಷಗಳ ಬಳಿಕ ವ್ಯಾಪಾರ ಚಟುವಟಿಕೆಗಳು ಮರುಚೇತನಗೊಂಡಿರುವುದು ಗಡಿ ಭಾಗದ ಆರ್ಥಿಕತೆ ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಹೊಸ ಆಶಾಕಿರಣ ಮೂಡಿಸಿದೆ.


