ಶ್ರೀನಗರ: ಜಮ್ಮು-ಕಾಶ್ಮೀರದ ಪವಿತ್ರ ಶ್ರೀ ಅಮರನಾಥ ಯಾತ್ರೆ ಗುರುವಾರ ಅಧಿಕೃತವಾಗಿ ಆರಂಭಗೊಂಡಿದ್ದು, ನುನ್‌ವಾನ್–ಪಹಲ್ಗಾಮ್ ಹಾಗೂ ಬಾಲ್ತಾಲ್ ಎರಡೂ ಮಾರ್ಗಗಳಲ್ಲಿ ಭಕ್ತರು ಭಾರೀ ಉತ್ಸಾಹದಿಂದ ಪಾದಯಾತ್ರೆ ಆರಂಭಿಸಿದ್ದಾರೆ.
ಬೆಳಗಿನ ಜಾವವೇ ಬೇಸ್ ಕ್ಯಾಂಪ್‌ಗಳಿಂದ ಹೊರಟ ಸಾವಿರಾರು ಯಾತ್ರಿಕರು “ಬಮ್ ಬಮ್ ಭೋಲೆ” ಹಾಗೂ “ಹರ ಹರ ಮಹಾದೇವ” ಘೋಷಣೆಗಳ ನಡುವೆ ಕಠಿಣ ಪರ್ವತ ಮಾರ್ಗವನ್ನು ಕ್ರಮಿಸುತ್ತಿದ್ದಾರೆ. ಭಗವಾನ್ ಶಿವನ ದರ್ಶನ ಪಡೆಯಲು ಹಾಗೂ ಸ್ವಯಂಭೂ ಹಿಮಲಿಂಗವನ್ನು ವೀಕ್ಷಿಸಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ.
ಯಾತ್ರಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಎರಡೂ ಮಾರ್ಗಗಳಲ್ಲಿ ಕುಡಿಯುವ ನೀರು, ಅನ್ನದಾನ, ವಿಶ್ರಾಂತಿ ಕೇಂದ್ರಗಳು, ವೈದ್ಯಕೀಯ ಸೇವೆಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆಡಳಿತದ ವ್ಯವಸ್ಥೆಗಳ ಬಗ್ಗೆ ಯಾತ್ರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಯಾತ್ರಿಕರು ತಮಗೆ ನೋಂದಾಯಿತ ದಿನಾಂಕದಲ್ಲೇ ಪ್ರಯಾಣಿಸಬೇಕು ಎಂದು ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರತಿದಿನ ಯಾತ್ರೆಗೆ ಅವಕಾಶ ನೀಡುವ ಭಕ್ತರ ಸಂಖ್ಯೆಗೆ ಮಿತಿ ನಿಗದಿಪಡಿಸಲಾಗಿದ್ದು, ನೋಂದಣಿ ಇಲ್ಲದೆ ಅಥವಾ ನಿಗದಿತ ದಿನಾಂಕಕ್ಕೂ ಮುನ್ನ ಆಗಮಿಸುವವರಿಗೆ ಯಾತ್ರೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಜಮ್ಮುವಿನಿಂದ ಇಂದು ಮುಂಜಾನೆ ಹೊರಟ ಎರಡನೇ ತಂಡದ ಯಾತ್ರಿಕರು ಕಾಶ್ಮೀರ ತಲುಪಿದ್ದು, ಅವರು ಶುಕ್ರವಾರ ಬೆಳಗ್ಗೆ ಪವಿತ್ರ ಗುಹೆಯತ್ತ ಪ್ರಯಾಣ ಆರಂಭಿಸಲಿದ್ದಾರೆ.


