ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2024 ಮತ್ತು 2025ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಹಾಗೂ ಪ್ರಶಸ್ತಿಗಳನ್ನು 100ಕ್ಕೂ ಹೆಚ್ಚು ಕಲಾವಿದರಿಗೆ ಇಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಿದರು.
ದೇಶದ ಪ್ರದರ್ಶನ ಕಲೆ, ಸಂಗೀತ, ನೃತ್ಯ, ರಂಗಭೂಮಿ, ಜಾನಪದ ಮತ್ತು ಬುಡಕಟ್ಟು ಕಲೆಗಳು, ಗೊಂಬೆಯಾಟ, ಸಾಂಪ್ರದಾಯಿಕ ರಂಗಭೂಮಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಗೆ ಮಹತ್ವದ ಕೊಡುಗೆ ನೀಡಿದ ಕಲಾವಿದರನ್ನು ಈ ಪ್ರಶಸ್ತಿಗಳ ಮೂಲಕ ಗೌರವಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಶಸ್ತಿ ಪುರಸ್ಕೃತರು ಆಧುನಿಕ ಭಾರತದ ಪ್ರತಿಭೆ ಮತ್ತು ಕಲೆಯ ಮೇಲಿನ ಅವರ ಅಪಾರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತಾರೆ ಎಂದು ಹೇಳಿದರು.
ದೇಶದಲ್ಲಿ ಸಂಗೀತಕ್ಕೆ ಹಲವು ಪದ್ಧತಿಗಳು, ನೃತ್ಯಕ್ಕೆ ಅನೇಕ ಶೈಲಿಗಳು ಹಾಗೂ ಜಾನಪದ ರಂಗಭೂಮಿಗೆ ಅಸಂಖ್ಯಾತ ರೂಪಗಳಿವೆ. ದೇಶದ ಶ್ರೀಮಂತ ಜಾನಪದ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಕಲಾವಿದರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು.
ಇದೇ ವೇಳೆ ದೇಶದ ಹಲವು ಜಾನಪದ ಕಲಾ ಪ್ರಕಾರಗಳು ಅಳಿವಿನ ಅಂಚಿನಲ್ಲಿರುವ ಬಗ್ಗೆ ರಾಷ್ಟ್ರಪತಿ ಕಳವಳ ವ್ಯಕ್ತಪಡಿಸಿದರು. ಇಂತಹ ವಿಶಿಷ್ಟ ಕಲಾ ಪರಂಪರೆಗಳನ್ನು ದಾಖಲಿಸುವುದರ ಜೊತೆಗೆ ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ನಡೆಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.
ಸಂಗೀತ ನಾಟಕ ಅಕಾಡೆಮಿ ಆಯೋಜಿಸುತ್ತಿರುವ ‘ಕಲಾ-ದೀಕ್ಷಾ’ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದ ರಾಷ್ಟ್ರಪತಿ, ಹಿರಿಯ ಕಲಾವಿದರು ತಮ್ಮ ಅನುಭವ ಮತ್ತು ಕೌಶಲ್ಯಗಳನ್ನು ಯುವ ಪೀಳಿಗೆಗೆ ಹಂಚಿಕೊಳ್ಳುವ ಮೂಲಕ ಮುಂದಿನ ತಲೆಮಾರಿನ ಕಲಾವಿದರನ್ನು ಬೆಳೆಸಬೇಕು ಎಂದು ಕರೆ ನೀಡಿದರು.


