ನವದೆಹಲಿ: ಭಾನುವಾರ ನಡೆಯಲಿರುವ NEET-UG ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತ ವಾಟ್ಸಾಪ್ ಸಂವಹನ ಚಾನೆಲ್ನ್ನು ಆರಂಭಿಸಿದೆ.
ಅಭ್ಯರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ಅಧಿಕೃತ ಮಾಹಿತಿ ಮತ್ತು ಸೂಚನೆಗಳನ್ನು ಕೇವಲ +91 7827980287 ಸಂಖ್ಯೆಯ ಪರಿಶೀಲಿತ (Verified) ವಾಟ್ಸಾಪ್ ಖಾತೆಯ ಮೂಲಕವೇ ಕಳುಹಿಸಲಾಗುವುದು ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
ಅಭ್ಯರ್ಥಿಗಳು ಯಾವುದೇ ಸಂದೇಶವನ್ನು ನಂಬುವ ಮೊದಲು ವಾಟ್ಸಾಪ್ನಲ್ಲಿ ಕಾಣಿಸುವ ನೀಲಿ ಬಣ್ಣದ ಪರಿಶೀಲನಾ ಗುರುತು (Blue Tick) ಹಾಗೂ “National Testing Agency” ಹೆಸರನ್ನು ಪರಿಶೀಲಿಸುವಂತೆ ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ, ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಗೆ ಈಗಾಗಲೇ ಹೊಸ ಪ್ರವೇಶ ಪತ್ರ (Admit Card) ಡೌನ್ಲೋಡ್ ಮಾಡಿಕೊಂಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅದನ್ನು ಡೌನ್ಲೋಡ್ ಮಾಡುವ ಅಗತ್ಯವಿಲ್ಲ ಎಂದು ಎನ್ಟಿಎ ತಿಳಿಸಿದೆ.
ಹೊಸ ಪ್ರವೇಶ ಪತ್ರವನ್ನು ಇನ್ನೂ ಡೌನ್ಲೋಡ್ ಮಾಡದ ವಿದ್ಯಾರ್ಥಿಗಳಿಗೆ ಮಾತ್ರ ಎಸ್ಎಂಎಸ್, ಇ-ಮೇಲ್ ಹಾಗೂ ವಾಟ್ಸಾಪ್ ಮೂಲಕ ಮಾಹಿತಿ ಕಳುಹಿಸಲಾಗುತ್ತಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇದಲ್ಲದೆ, ಮೇ 3ರಂದು ನಡೆದ ಮೂಲ ಪರೀಕ್ಷೆಗೆ ನೀಡಲಾಗಿದ್ದ ಪ್ರವೇಶ ಪತ್ರಗಳು ಮರುಪರೀಕ್ಷೆಗೆ ಮಾನ್ಯವಾಗುವುದಿಲ್ಲ. ಹಲವು ಅಭ್ಯರ್ಥಿಗಳಿಗೆ ಅವರ ಆಯ್ಕೆಯ ನಗರಗಳಲ್ಲಿ ಹೊಸ ಪರೀಕ್ಷಾ ಕೇಂದ್ರಗಳನ್ನು ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಹೊಸ ಪ್ರವೇಶ ಪತ್ರವನ್ನು ಬಳಸುವುದು ಕಡ್ಡಾಯವಾಗಿದೆ ಎಂದು ಎನ್ಟಿಎ ತಿಳಿಸಿದೆ.
ಅಭ್ಯರ್ಥಿಗಳು ಅಧಿಕೃತ ಮೂಲಗಳಿಂದ ಬಂದ ಮಾಹಿತಿಯನ್ನು ಮಾತ್ರ ನಂಬುವಂತೆ ಹಾಗೂ ವದಂತಿಗಳಿಗೆ ಕಿವಿಗೊಡದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮನವಿ ಮಾಡಿದೆ.


