ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ; ವಿಶ್ವಸಂಸ್ಥೆಯಲ್ಲಿ ಭಾರತದ ಕಠಿಣ ಸಂದೇಶ

1 Min Read
1 Min Read

ನವದೆಹಲಿ/ವಿಶ್ವಸಂಸ್ಥೆ: ಹೋರ್ಮುಜ್ ಜಲಸಂಧಿ (Strait of Hormuz) ಮೂಲಕ ಸಂಚರಿಸುತ್ತಿದ್ದ ಹಲವು ವಾಣಿಜ್ಯ ಹಡಗುಗಳ ಮೇಲಿನ ಇತ್ತೀಚಿನ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂದು ಭಾರತ ಒತ್ತಾಯಿಸಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್ ಮಾತನಾಡಿ, ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಲ್ಪ ವಿರಾಮ ದೊರೆತಿದ್ದರೂ, ಇದೀಗ ಮತ್ತೆ ದಾಳಿಗಳು ಮತ್ತು ಹಿಂಸಾಚಾರ ತೀವ್ರಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಈ ತಿಂಗಳು ಹೋರ್ಮುಜ್ ಜಲಸಂಧಿ ಮೂಲಕ ಸಂಚರಿಸುತ್ತಿದ್ದ GFS Galaxy, MT Al Bahiyah ಹಾಗೂ MT Mombasa ಸೇರಿದಂತೆ ಹಲವು ಹಡಗುಗಳ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದರು.

ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ, ಸುರಕ್ಷಿತ ಹಾಗೂ ಯಾವುದೇ ಅಡ್ಡಿಯಿಲ್ಲದ ನೌಕಾಯಾನ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ತಕ್ಷಣ ಪುನಃಸ್ಥಾಪಿಸಬೇಕು ಎಂದು ಭಾರತ ವಿಶ್ವ ಸಮುದಾಯವನ್ನು ಆಗ್ರಹಿಸಿದೆ.

ಜಾಗತಿಕ ವ್ಯಾಪಾರ ಮತ್ತು ಇಂಧನ ಪೂರೈಕೆಗೆ ಹೋರ್ಮುಜ್ ಜಲಸಂಧಿ ಅತ್ಯಂತ ಮಹತ್ವದ ಸಮುದ್ರ ಮಾರ್ಗವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವುದು ಅಂತರರಾಷ್ಟ್ರೀಯ ಸಮುದಾಯದ ಜವಾಬ್ದಾರಿಯಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

Share This Article