ನವದೆಹಲಿ: ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರೂಪಿಸಲಾಗಿರುವ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) [VB-G RAM G] ಕಾಯ್ದೆ-2025 ಜುಲೈ 1ರಿಂದ ಜಾರಿಗೆ ಬರಲಿದ್ದು, ಅದರ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ 100ಕ್ಕೂ ಹೆಚ್ಚು ಏರಿಯಾ ಅಧಿಕಾರಿಗಳನ್ನು ನಿಯೋಜಿಸಲು ಮುಂದಾಗಿದೆ.
ಈ ಅಧಿಕಾರಿಗಳಿಗೆ ಕಾಯ್ದೆಯ ಪ್ರಮುಖ ಅಂಶಗಳು, ಅನುಷ್ಠಾನ ಚೌಕಟ್ಟು, ಸಂಸ್ಥಾತ್ಮಕ ವ್ಯವಸ್ಥೆ, ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆ ಹಾಗೂ ರಾಜ್ಯಗಳಿಗೆ ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಕುರಿತು ಗ್ರಾಮೀಣಾಭಿವೃದ್ಧಿ ಸಚಿವಾಲಯ ವಿಶೇಷ ತರಬೇತಿ ಮತ್ತು ಪರಿಚಯ ಕಾರ್ಯಕ್ರಮವನ್ನು ಆಯೋಜಿಸಿದೆ.
ನಿಯೋಜಿತ ಅಧಿಕಾರಿಗಳು ವಿವಿಧ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಯೋಜನೆ ಅನುಷ್ಠಾನದ ಅಗತ್ಯತೆಗಳನ್ನು ಪರಿಶೀಲಿಸಲಿದ್ದಾರೆ. ಜೊತೆಗೆ ಉತ್ತಮ ಅನುಭವಗಳ ವಿನಿಮಯ, ಸಾಮರ್ಥ್ಯ ವೃದ್ಧಿ ಹಾಗೂ ಕಾರ್ಯಾಚರಣೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಹಕರಿಸಲಿದ್ದಾರೆ.
ಕೇಂದ್ರ ಸರ್ಕಾರದ ಪ್ರಕಾರ, ಈ ಏರಿಯಾ ಅಧಿಕಾರಿ ವ್ಯವಸ್ಥೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯ ಸುಗಮ ಜಾರಿಗೆ ನೆರವಾಗಲಿದ್ದು, ಸಮನ್ವಯ, ಮಾರ್ಗದರ್ಶನ ಹಾಗೂ ನಿರಂತರ ಸಂಸ್ಥಾತ್ಮಕ ಬೆಂಬಲ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಕಾಯ್ದೆ ಜಾರಿಗೆ ಮುನ್ನ ಸರ್ಕಾರ ಹಲವು ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ. 2026-27ನೇ ಹಣಕಾಸು ವರ್ಷಕ್ಕಾಗಿ ₹95 ಸಾವಿರ ಕೋಟಿಗೂ ಅಧಿಕ ಮಧ್ಯಂತರ ಅನುದಾನ ಮಂಜೂರಾಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು DBT-SPARSH ವೇದಿಕೆಗೆ ಸೇರಿಸಲಾಗಿದೆ.
ಇದಲ್ಲದೆ, ಸಕ್ರಿಯ ಕಾರ್ಮಿಕರಲ್ಲಿ ಶೇ.93ರಷ್ಟು ಮಂದಿಗೆ ಇ-ಕೆವೈಸಿ ಪೂರ್ಣಗೊಂಡಿದ್ದು, ದೇಶಾದ್ಯಂತ ಮುಖ ಗುರುತಿನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಯೋಜನೆ ಅನುಷ್ಠಾನಕ್ಕಾಗಿ ವಿಶೇಷ ಡಿಜಿಟಲ್ ವೇದಿಕೆಗಳ ಅಭಿವೃದ್ಧಿ ಹಾಗೂ ವ್ಯಾಪಕ ತರಬೇತಿ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಈವರೆಗೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಬಜೆಟ್‌ನಲ್ಲಿ ಯೋಜನೆಗೆ ಅನುದಾನ ಮೀಸಲಿಟ್ಟಿದ್ದು, ಆರು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು VB-G RAM G ಚೌಕಟ್ಟಿನಡಿ ತಮ್ಮ ರಾಜ್ಯ ಯೋಜನೆಗಳನ್ನು ಅಧಿಕೃತವಾಗಿ ಪ್ರಕಟಿಸಿವೆ ಎಂದು ಸಚಿವಾಲಯ ತಿಳಿಸಿದೆ.


