ಇಂದು ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ

1 Min Read
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ‘ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026’ಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.

ನಾಲ್ಕು ದಿನಗಳ ಈ ಶೃಂಗಸಭೆ ಈ ತಿಂಗಳ 5ರವರೆಗೆ ನಡೆಯಲಿದ್ದು, ‘ಹೂಡಿಕೆ, ನಾವೀನ್ಯತೆ ಮತ್ತು ಸ್ಫೂರ್ತಿ’ (Invest, Innovate, Inspire) ಎಂಬುದು ಈ ಬಾರಿಯ ಮುಖ್ಯ ಆಶಯವಾಗಿದೆ.

130ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 40ಕ್ಕೂ ಅಧಿಕ ಸಚಿವರು, ನೀತಿ ನಿರೂಪಕರು, ಹೂಡಿಕೆದಾರರು, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇಂಧನ ಕ್ಷೇತ್ರದ ಪ್ರಮುಖ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಕಾಶವಾಣಿ ವರದಿಗಾರರು ತಿಳಿಸಿದ್ದಾರೆ.

ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಹೂಡಿಕೆ, ಉದ್ಯಮ ವಲಯದ ಸಹಭಾಗಿತ್ವ ಮತ್ತು ತಂತ್ರಜ್ಞಾನ ಪಾಲುದಾರಿಕೆಗೆ ಜಾಗತಿಕ ವೇದಿಕೆಯಾಗಿ ಈ ಶೃಂಗಸಭೆ ಕಾರ್ಯನಿರ್ವಹಿಸಲಿದೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಯುರೋಪಿಯನ್ ಒಕ್ಕೂಟ, ಫ್ರಾನ್ಸ್, ಜರ್ಮನಿ, ನೆದರ್‌ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಬ್ರಿಟನ್ ದೇಶಗಳು ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸುತ್ತಿವೆ.

ಈ ಶೃಂಗಸಭೆಯ ಜೊತೆಗೆ ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟದ (ISA) 9ನೇ ಅಧಿವೇಶನ ಹಾಗೂ 4ನೇ ಅಂತಾರಾಷ್ಟ್ರೀಯ ಹಸಿರು ಹೈಡ್ರೋಜನ್ ಸಮ್ಮೇಳನವೂ ನಡೆಯಲಿದೆ.

ಇಂಧನ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವುದು, ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಹಾಗೂ ಯೋಜನೆಗಳ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪೂರ್ಣಾವಧಿ ಅಧಿವೇಶನಗಳು, ಸಚಿವರ ಮಟ್ಟದ ಚರ್ಚೆಗಳು ಮತ್ತು ವಿವಿಧ ಸರ್ಕಾರಗಳ ನಡುವಿನ ಸಭೆಗಳನ್ನು ಆಯೋಜಿಸಲಾಗಿದೆ.

ಇನ್ನು ಎಕ್ಸ್‌ಪೋದಲ್ಲಿ 400ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದು, ಸುಧಾರಿತ ತಂತ್ರಜ್ಞಾನಗಳು, ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ಸ್ವಚ್ಛ ಇಂಧನ ಪರಿಹಾರಗಳನ್ನು ಪ್ರದರ್ಶಿಸಲಿದ್ದಾರೆ. ಸೌರ ಮತ್ತು ಪವನ ವಿದ್ಯುತ್, ಹಸಿರು ಹೈಡ್ರೋಜನ್, ಇಂಧನ ಸಂಗ್ರಹಣೆ ಸೇರಿದಂತೆ ನವೀನ ಇಂಧನ ಕ್ಷೇತ್ರಗಳಲ್ಲಿನ ಉತ್ಪನ್ನಗಳು ಹಾಗೂ ತಂತ್ರಜ್ಞಾನಗಳು ಪ್ರದರ್ಶನಗೊಳ್ಳಲಿವೆ.

Share This Article