ಭಾರತಕ್ಕೆ ಮೊದಲ ಭೇಟಿ: ನವದೆಹಲಿಗೆ ಆಗಮಿಸಿದ ಪ್ರಿನ್ಸ್ ರಹೀಂ ಆಗಾ ಖಾನ್

1 Min Read
1 Min Read

ನವದೆಹಲಿ: ಇಸ್ಮಾಯಿಲಿ ಮುಸ್ಲಿಂ ಸಮುದಾಯದ 50ನೇ ವಂಶಪಾರಂಪರಿಕ ಇಮಾಮ್ ಹಾಗೂ ಆಗಾ ಖಾನ್ ಡೆವಲಪ್‌ಮೆಂಟ್ ನೆಟ್‌ವರ್ಕ್‌ನ ಅಧ್ಯಕ್ಷ ಪ್ರಿನ್ಸ್ ರಹೀಂ ಆಗಾ ಖಾನ್ ಅವರು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ನವದೆಹಲಿಗೆ ಆಗಮಿಸಿದ್ದಾರೆ. ನವದೆಹಲಿಗೆ ಆಗಮಿಸಿದ ಅವರನ್ನು ಭಾರತೀಯ ಪ್ರತಿನಿಧಿಗಳ ತಂಡ ಆತ್ಮೀಯವಾಗಿ ಸ್ವಾಗತಿಸಿತು.

ಪ್ರಿನ್ಸ್ ರಹೀಂ ಆಗಾ ಖಾನ್ ಅವರ ಭಾರತ ಭೇಟಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವಾಗತಿಸಿದ್ದು, ಈ ಭೇಟಿಯು ಆಗಾ ಖಾನ್ ಡೆವಲಪ್‌ಮೆಂಟ್ ನೆಟ್‌ವರ್ಕ್‌ನೊಂದಿಗೆ ಸಾಮಾಜಿಕ ಅಭಿವೃದ್ಧಿ ಹಾಗೂ ಪರಂಪರೆ ಸಂರಕ್ಷಣೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಹಕಾರವನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದೆ.

ಅಲ್ಲದೆ, ಅಭಿವೃದ್ಧಿ ಕಾರ್ಯಗಳು ಹಾಗೂ ಸಮುದಾಯ ಆಧಾರಿತ ವಿವಿಧ ಯೋಜನೆಗಳಲ್ಲಿ ಮುಂದಿನ ಹಂತದ ಸಹಕಾರದ ಸಾಧ್ಯತೆಗಳನ್ನು ಅನ್ವೇಷಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ಸಚಿವಾಲಯ ಹೇಳಿದೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿರುವ ಪ್ರಿನ್ಸ್ ರಹೀಂ ಆಗಾ ಖಾನ್ ಅವರು ಇದೇ ತಿಂಗಳ 15ರವರೆಗೆ ದೇಶದಲ್ಲಿರಲಿದ್ದಾರೆ. ಇಂದು ಅವರು ಉಪರಾಷ್ಟ್ರಪತಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ನವದೆಹಲಿಯಲ್ಲಿರುವ ಅವಧಿಯಲ್ಲಿ ಪ್ರಿನ್ಸ್ ರಹೀಂ ಆಗಾ ಖಾನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೂ ಅವರು ಮಾತುಕತೆ ನಡೆಸಲಿದ್ದಾರೆ.

ಭಾರತ ಪ್ರವಾಸದ ಭಾಗವಾಗಿ ಪ್ರಿನ್ಸ್ ರಹೀಂ ಆಗಾ ಖಾನ್ ಅವರು ಅಹಮದಾಬಾದ್, ಮುಂಬೈ ಹಾಗೂ ಹೈದರಾಬಾದ್‌ಗೂ ಭೇಟಿ ನೀಡಲಿದ್ದಾರೆ. ಈ ನಗರಗಳಲ್ಲಿ ಆಗಾ ಖಾನ್ ಡೆವಲಪ್‌ಮೆಂಟ್ ನೆಟ್‌ವರ್ಕ್ ಸಾಮಾಜಿಕ ಅಭಿವೃದ್ಧಿ, ಸಮುದಾಯ ಕಲ್ಯಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಯೋಜನೆಗಳನ್ನು ಕೈಗೊಂಡಿದೆ.

ಇಸ್ಮಾಯಿಲಿ ಸಮುದಾಯದ 50ನೇ ಇಮಾಮ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಿನ್ಸ್ ರಹೀಂ ಆಗಾ ಖಾನ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ.

Share This Article