ನವದೆಹಲಿ: ಕಳೆದ 12 ವರ್ಷಗಳಲ್ಲಿ ದೇಶದ ಮಧ್ಯಮ ವರ್ಗದ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಸಮಗ್ರ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ಭದ್ರತೆ, ಉತ್ತಮ ಸೌಲಭ್ಯಗಳು ಮತ್ತು ಹೊಸ ಅವಕಾಶಗಳನ್ನು ಒದಗಿಸಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಆದಾಯ ತೆರಿಗೆ ಸುಧಾರಣೆಗಳ ಮೂಲಕ ತೆರಿಗೆ ವಿನಾಯಿತಿ, ಜಿಎಸ್ಟಿ ಜಾರಿಯ ಮೂಲಕ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಸುಗಮತೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಉಜ್ವಲಾ ಯೋಜನೆ, ಜಲ್ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಅಭಿಯಾನದಂತಹ ಯೋಜನೆಗಳು ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಸುಲಭವಾಗಿ ತಲುಪುವಂತೆ ಮಾಡಿವೆ ಎಂದು ಅವರು ಹೇಳಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಸ್ವಂತ ಮನೆ ಹೊಂದುವ ಕನಸು ನನಸಾಗಿದ್ದು, ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಆರೋಗ್ಯ ಭದ್ರತೆ ಒದಗಿಸಲಾಗಿದೆ ಎಂದು ನಿತಿನ್ ನಬೀನ್ ತಿಳಿಸಿದ್ದಾರೆ.
ಮಧ್ಯಮ ವರ್ಗದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾದ ಈ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಲು ನೆರವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಆರ್ಥಿಕತೆಯಲ್ಲಿ ಮಧ್ಯಮ ವರ್ಗವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದು, ಆತ್ಮನಿರ್ಭರ ಭಾರತ ಹಾಗೂ ವಿಕಸಿತ ಭಾರತ ನಿರ್ಮಾಣದ ಸಂಕಲ್ಪವನ್ನು ವೇಗಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಕಲ್ಯಾಣಕಾರಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಮಧ್ಯಮ ವರ್ಗದ ವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಚೈತನ್ಯ ನೀಡಿವೆ ಎಂದು ನಿತಿನ್ ನಬೀನ್ ತಿಳಿಸಿದ್ದಾರೆ.


