ಪುದುಚೇರಿ: ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆಗೆ ಪುದುಚೇರಿ ವಿಧಾನಸಭೆ ಸರ್ವಾನುಮತದಿಂದ ವಿರೋಧ ವ್ಯಕ್ತಪಡಿಸಿದೆ. ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಮುಖ್ಯಮಂತ್ರಿ ಎನ್. ರಂಗಸಾಮಿ ಅವರು ನಿರ್ಣಯವನ್ನು ಮಂಡಿಸಿದರು. ತಮಿಳುನಾಡು ಗಡಿಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿ ಪ್ರಸ್ತಾಪಿಸಲಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂದು ಅವರು ಒತ್ತಾಯಿಸಿದರು.
ಮೇಕೆದಾಟು ಯೋಜನೆಯು ಪುದುಚೇರಿಯ ಜನರ ಹಿತಾಸಕ್ತಿಗೆ ವಿರುದ್ಧವಾಗಲಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವ ಕಾವೇರಿ ನೀರು ವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಇದು ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ರಂಗಸಾಮಿ ಹೇಳಿದರು.
ಕಾವೇರಿ ಜಲಾನಯನ ರಾಜ್ಯಗಳ ಒಪ್ಪಿಗೆ ಅಗತ್ಯ
ಪುದುಚೇರಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳ ಒಪ್ಪಿಗೆಯಿಲ್ಲದೆ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ವಿಧಾನಸಭೆ ಆಗ್ರಹಿಸಿದೆ.
ಕಾವೇರಿ ನೀರಿನ ಹಕ್ಕುಗಳನ್ನು ರಕ್ಷಿಸುವುದು ಮತ್ತು ಪುದುಚೇರಿಯ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ರಂಗಸಾಮಿ ಹೇಳಿದರು.
ಕಾನೂನು, ಆಡಳಿತಾತ್ಮಕ ಕ್ರಮಕ್ಕೆ ಸರ್ಕಾರ ಸಿದ್ಧ
ಪುದುಚೇರಿಯ ನೀರಿನ ಹಕ್ಕುಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಆಡಳಿತಾತ್ಮಕ ಹಾಗೂ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ವಿಶೇಷವಾಗಿ ಕರೈಕಾಲ್ ಪ್ರದೇಶದ ರೈತರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಸರ್ಕಾರ ಕೈಗೊಳ್ಳುವ ಇಂತಹ ಎಲ್ಲ ಕ್ರಮಗಳಿಗೆ ವಿಧಾನಸಭೆ ಸರ್ವಾನುಮತದ ಬೆಂಬಲ ನೀಡಿದೆ.
ಖಾಸಗಿ ಸದಸ್ಯರ ನಿರ್ಣಯ ಸರ್ಕಾರದ ನಿರ್ಣಯವಾಗಿ ಅಂಗೀಕಾರ
ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುವ ನಿರ್ಣಯವನ್ನು ಆರಂಭದಲ್ಲಿ ಖಾಸಗಿ ಸದಸ್ಯರ ನಿರ್ಣಯವಾಗಿ ಮಂಡಿಸಲಾಗಿತ್ತು. ಬಳಿಕ ಅದನ್ನು ಸರ್ಕಾರದ ನಿರ್ಣಯವಾಗಿ ಪರಿವರ್ತಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಆಗಸ್ಟ್ 24ರಂದು ಆರಂಭಗೊಂಡ ಆರು ದಿನಗಳ ವಿಧಾನಸಭಾ ಅಧಿವೇಶನ ಅಂತ್ಯಗೊಂಡಿದ್ದು, ಬಳಿಕ ಹಂಗಾಮಿ ಸ್ಪೀಕರ್ ಎ. ಅನ್ಬಳಗನ್ ಅವರು ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ (ಸೈನ್ ಡೈ) ಎಂದು ಘೋಷಿಸಿದರು.


