ಭಾರತದ ಆರ್ಥಿಕತೆಗೆ ಭರ್ಜರಿ ವೇಗ: ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.8ರಷ್ಟು ಏರಿಕೆ; ಆರ್‌ಬಿಐ ಅಂದಾಜನ್ನೂ ಮೀರಿದ ಬೆಳವಣಿಗೆ

2 Min Read
2 Min Read

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂದಾಜಿಸಿದ್ದ ಶೇ.7ರ ಪ್ರಮಾಣವನ್ನೂ ಮೀರಿದೆ. ಈ ಬೆಳವಣಿಗೆಯನ್ನು ಅಮೆರಿಕ ಭಾರತವನ್ನು ‘ಚುರುಕಾದ, ಬಲಿಷ್ಠ ಮತ್ತು ಸ್ಥಿತಿಸ್ಥಾಪಕ ಆರ್ಥಿಕತೆ’ಯಾಗಿ ಗುರುತಿಸಿದೆ.

ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ನಿರೀಕ್ಷೆಗಿಂತ ಉತ್ತಮವಾಗಿರುವುದನ್ನು ಅಮೆರಿಕದ ಆಡಳಿತ ಗಮನಿಸಿದೆ. ಶ್ವೇತಭವನದ ಹಿರಿಯ ಉಪ ಪತ್ರಿಕಾ ಕಾರ್ಯದರ್ಶಿ ಕುಶ್ ದೇಸಾಯಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಇತ್ತೀಚಿನ ಜಿಡಿಪಿ ಅಂಕಿ-ಅಂಶಗಳು ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗುತ್ತಿದೆ ಎಂಬ ಟ್ರಂಪ್ ಆಡಳಿತದ ನಿಲುವನ್ನು ಮತ್ತಷ್ಟು ದೃಢಪಡಿಸಿವೆ ಎಂದು ಹೇಳಿದ್ದಾರೆ.

ಭಾರತದ ಬೃಹತ್ ಹಾಗೂ ನಿರಂತರವಾಗಿ ವಿಸ್ತರಿಸುತ್ತಿರುವ ಆರ್ಥಿಕತೆ ಅಮೆರಿಕದ ಕಂಪನಿಗಳು ಮತ್ತು ಹೂಡಿಕೆದಾರರಿಗೆ ದೊಡ್ಡ ಪ್ರಮಾಣದ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಅಮೆರಿಕದ ಹೂಡಿಕೆಗೆ ಒತ್ತು

ಭಾರತದಲ್ಲಿ ಅಮೆರಿಕದ ಹೂಡಿಕೆ ಹೆಚ್ಚಿಸುವುದು ಹಾಗೂ ಅಮೆರಿಕದಲ್ಲಿ ಭಾರತೀಯ ಕಂಪನಿಗಳ ಹೂಡಿಕೆಗೆ ಉತ್ತೇಜನ ನೀಡುವುದು ಅಮೆರಿಕ ಆಡಳಿತದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ದೇಸಾಯಿ ಹೇಳಿದ್ದಾರೆ.

ಭಾರತ–ಅಮೆರಿಕ ಸಂಬಂಧಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸ್ನೇಹದ ಬಗ್ಗೆಯೂ ಅವರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದಾರೆ ಎಂದು ದೇಸಾಯಿ ಉಲ್ಲೇಖಿಸಿದ್ದಾರೆ.

ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆ ಮುಂದುವರಿಕೆ

ಪ್ರಸ್ತಾವಿತ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಇದೀಗ ತಾಂತ್ರಿಕ ಹಂತಕ್ಕೆ ತಲುಪಿವೆ ಎಂದು ಶ್ವೇತಭವನದ ಅಧಿಕಾರಿ ತಿಳಿಸಿದ್ದಾರೆ.

ಉತ್ಪನ್ನಗಳ ವರ್ಗೀಕರಣ, ಸುಂಕ ನಿಯಮಗಳು ಸೇರಿದಂತೆ ಒಪ್ಪಂದದ ಹಲವು ತಾಂತ್ರಿಕ ಅಂಶಗಳನ್ನು ಇತ್ಯರ್ಥಪಡಿಸಲು ಎರಡೂ ದೇಶಗಳು ಚರ್ಚೆ ನಡೆಸುತ್ತಿವೆ.

ವ್ಯಾಪಾರ ಒಪ್ಪಂದದ ಕುರಿತು ಅಮೆರಿಕ ಆಶಾವಾದ ಹೊಂದಿದ್ದು, ಈ ಒಪ್ಪಂದದ ಮೂಲಕ ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಹಾಗೂ ರಾಜಕೀಯ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ದೇಸಾಯಿ ಹೇಳಿದ್ದಾರೆ.

ಭಾರತದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಹೂಡಿಕೆ ಅವಕಾಶಗಳು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿವೆ.

Share This Article