ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಂದಿನ 10 ದಿನಗಳ ಕಾಲ ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (MeT) ಮುನ್ಸೂಚನೆ ನೀಡಿದೆ. ಅಲ್ಲಲ್ಲಿ ಅಲ್ಪಾವಧಿಯ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಇಂದಿನಿಂದ ಆಗಸ್ಟ್ 30ರವರೆಗೆ ಬೆಳಗಿನ ಜಾವ ಮತ್ತು ಮಧ್ಯಾಹ್ನದ ವೇಳೆಯಲ್ಲಿ ಕೆಲವು ಪ್ರದೇಶಗಳಲ್ಲಿ ಅಲ್ಪಾವಧಿಯ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಆಗಸ್ಟ್ 31, ಸೆಪ್ಟೆಂಬರ್ 1ರಂದು ಮಳೆ ಹೆಚ್ಚಳ ಸಾಧ್ಯತೆ
ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಹವಾಮಾನ ಸಾಮಾನ್ಯವಾಗಿ ಬಿಸಿ ಹಾಗೂ ತೇವಾಂಶದಿಂದ ಕೂಡಿರಲಿದೆ.
ಬೆಳಗಿನ ಜಾವ ಮತ್ತು ಮಧ್ಯಾಹ್ನದ ವೇಳೆಯಲ್ಲಿ ಕೆಲವೆಡೆ ಅಲ್ಪಾವಧಿಯಲ್ಲಿ ತೀವ್ರ ಮಳೆ ಸುರಿಯುವ ಸಾಧ್ಯತೆಯೂ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಇನ್ನು ಸೆಪ್ಟೆಂಬರ್ 2ರಿಂದ 7ರವರೆಗೆ ಹವಾಮಾನ ಬಹುತೇಕ ಒಣಗಿರಲಿದೆ. ಆದರೆ ಬೆಳಗಿನ ಜಾವ ಮತ್ತು ಮಧ್ಯಾಹ್ನದ ವೇಳೆಯಲ್ಲಿ ಕೆಲವು ಪ್ರದೇಶಗಳಲ್ಲಿ ಅಲ್ಪಾವಧಿಯ ಮಳೆ ಅಥವಾ ಗುಡುಗು ಸಹಿತ ಮಳೆಯಾಗಬಹುದು.
ಫ್ಲ್ಯಾಶ್ ಫ್ಲಡ್, ಭೂಕುಸಿತದ ಸಾಧ್ಯತೆ
ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಸ್ಥಳೀಯವಾಗಿ ತೀವ್ರ ಮಳೆ ಸುರಿದರೆ ಹಠಾತ್ ಪ್ರವಾಹ (Flash Flood), ಮಣ್ಣು ಕುಸಿತ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸ್ಥಳೀಯ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರು ಕೊಯ್ಲು ಸೇರಿದಂತೆ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಇಲಾಖೆ ಸಲಹೆ ನೀಡಿದೆ.
ಶ್ರೀನಗರ, ಜಮ್ಮುವಿನಲ್ಲಿ ದಾಖಲಾಗಿದ ತಾಪಮಾನ
ಶುಕ್ರವಾರ ಶ್ರೀನಗರದಲ್ಲಿ ಗರಿಷ್ಠ 29.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜಮ್ಮು ನಗರದಲ್ಲಿ ಗರಿಷ್ಠ 34.6 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 24.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ತೀವ್ರ ಮಳೆಯ ಸಂದರ್ಭದಲ್ಲಿ ವಿಶೇಷವಾಗಿ ಅಪಾಯದ ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.


