ನಗರಾಭಿವೃದ್ಧಿಗೆ ಚುರುಕು: ಅಧಿಕಾರಿಗಳಿಗೆ 48 ಗಂಟೆಗಳ ಕಡತ ವಿಲೇವಾರಿ ಗುರಿ

3 Min Read
3 Min Read

ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ನಾಗರಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಹಾಗೂ ನಾಗರಿಕ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ಪೌರಾಡಳಿತ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರ ಹಲವು ಮಹತ್ವದ ಸೂಚನೆಗಳನ್ನು ನೀಡಿದೆ.

ಬೆಂಗಳೂರಿನಲ್ಲಿ ಗುರುವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಯೋಜನಾ ನಿರ್ದೇಶಕರು (PD) ಹಾಗೂ ಕಾರ್ಯಪಾಲಕ ಅಭಿಯಂತರರ (EE) ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾವಾರು ಮತ್ತು ಯೋಜನಾವಾರು ಪ್ರಗತಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ನಗರಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ, ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ವಹಣೆ ಮತ್ತು ತೆರಿಗೆ ಸಂಗ್ರಹಣೆ ಸೇರಿದಂತೆ ಮೂಲಭೂತ ನಾಗರಿಕ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತಿಂಗಳಿಗೊಮ್ಮೆ ಕಡ್ಡಾಯ ಪ್ರಗತಿ ಪರಿಶೀಲನೆ

ಜಿಲ್ಲಾ ಯೋಜನಾ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಪ್ರತಿ ತಿಂಗಳು ಕಡ್ಡಾಯವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೈಗೊಂಡ ಕ್ರಮಗಳು, ಸಾಧಿಸಿರುವ ಪ್ರಗತಿ ಹಾಗೂ ಬಾಕಿ ಇರುವ ಸಮಸ್ಯೆಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

48 ಗಂಟೆಯೊಳಗೆ ಕಡತ ವಿಲೇವಾರಿ

ಸರ್ಕಾರಿ ಕಚೇರಿಗಳಲ್ಲಿ ಕಡತಗಳನ್ನು ಅನಗತ್ಯವಾಗಿ ವಿಳಂಬ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾಧ್ಯವಾದಷ್ಟು 48 ಗಂಟೆಗಳೊಳಗೆ ಕಡತಗಳನ್ನು ವಿಲೇವಾರಿ ಮಾಡಬೇಕು. ಕಾನೂನುಬದ್ಧ ಕಾರಣಗಳಿಂದ ಕಡತ ವಿಲೇವಾರಿ ಸಾಧ್ಯವಾಗದಿದ್ದರೆ, ವಿಳಂಬಕ್ಕೆ ಸ್ಪಷ್ಟ ಕಾರಣವನ್ನು ದಾಖಲಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

ಜನರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ

ಸರ್ಕಾರಿ ಕಚೇರಿಗಳಿಗೆ ಬರುವ ಜನಸಾಮಾನ್ಯರನ್ನು ಅನಗತ್ಯವಾಗಿ ಅಲೆದಾಡಿಸುವುದು ಅಥವಾ ಒಂದೇ ಕೆಲಸಕ್ಕಾಗಿ ಪದೇಪದೇ ಕಚೇರಿಗೆ ಬರುವಂತೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ, ಪಾರದರ್ಶಕ, ತ್ವರಿತ ಹಾಗೂ ಜನಸ್ನೇಹಿ ಆಡಳಿತ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಜನರಿಗೆ ತೊಂದರೆ ನೀಡುವ ಅಥವಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಸ್ವಂತ ಆದಾಯ ಹೆಚ್ಚಿಸಿಕೊಳ್ಳಲು ಸೂಚನೆ

ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು ಶೇ.40ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ, ನಗರ ನಾಗರಿಕರಿಗೆ ಗುಣಮಟ್ಟದ ಮೂಲಭೂತ ಸೌಕರ್ಯ ಮತ್ತು ಪರಿಣಾಮಕಾರಿ ಸೇವೆಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

ನಗರ ಸ್ಥಳೀಯ ಸಂಸ್ಥೆಗಳು ಕೇವಲ ಸರ್ಕಾರದ ಅನುದಾನವನ್ನೇ ಅವಲಂಬಿಸದೆ ತಮ್ಮದೇ ಆದ ಆದಾಯ ಮೂಲಗಳನ್ನು ಬಲಪಡಿಸಬೇಕು. ತೆರಿಗೆ ಸಂಗ್ರಹಣೆಯನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಬೇಕು ಎಂದು ಸೂಚಿಸಲಾಗಿದೆ.

ಡಿಸೆಂಬರ್ ಒಳಗೆ ಬಾಕಿ ಕಾಮಗಾರಿ ಪೂರ್ಣ

ಪ್ರಸ್ತುತ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಗುರಿ ನೀಡಲಾಗಿದೆ. ಡಿಸೆಂಬರ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದ್ದು, ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಮುಂದಿನ ಎರಡು ತಿಂಗಳಿಗೆ ಪ್ರತಿಯೊಬ್ಬ ಅಧಿಕಾರಿಗೂ ಸ್ಪಷ್ಟ ಕಾರ್ಯಗುರಿ ನಿಗದಿಪಡಿಸಲಾಗಿದೆ. ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವಲ್ಲಿ ವಿಫಲರಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಪ್ರತಿದಿನ 3.30ರಿಂದ 5.30ರವರೆಗೆ ಸಾರ್ವಜನಿಕ ಭೇಟಿ

ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸಿ ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಎಲ್ಲಾ ಅಧಿಕಾರಿಗಳು ಪ್ರತಿದಿನ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಕಚೇರಿಯಲ್ಲಿ ಸಾರ್ವಜನಿಕ ಭೇಟಿಗೆ ಕಡ್ಡಾಯವಾಗಿ ಲಭ್ಯವಿರುವಂತೆ ಸೂಚಿಸಲಾಗಿದೆ.

ಜನರ ತೆರಿಗೆ ಹಣದಿಂದ ನಡೆಯುವ ಆಡಳಿತ ವ್ಯವಸ್ಥೆ ಜನರ ಸೇವೆಗಾಗಿಯೇ ಎಂಬುದನ್ನು ಪ್ರತಿಯೊಬ್ಬ ಅಧಿಕಾರಿಯೂ ಅರಿತುಕೊಳ್ಳಬೇಕು. ಪ್ರಾಮಾಣಿಕತೆ, ಪಾರದರ್ಶಕತೆ, ಸಮಯಪಾಲನೆ ಮತ್ತು ಜವಾಬ್ದಾರಿತನದಿಂದ ಕಾರ್ಯನಿರ್ವಹಿಸುವ ಮೂಲಕ ನಗರಗಳ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಪೌರಾಡಳಿತ ಇಲಾಖೆಯನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಜನಸ್ನೇಹಿಯಾಗಿಸುವುದು ಸರ್ಕಾರದ ಸಂಕಲ್ಪವಾಗಿದೆ.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಬಿ. ಕಾವೇರಿ, ಡಿಎಂಎ ನಿರ್ದೇಶಕ ರವೀಂದ್ರ, ಸ್ವಚ್ಛ ಭಾರತ್ ಮಿಷನ್‌ನ ಮುಖ್ಯಸ್ಥ ಸೆಲ್ವಮಣಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article