ವಿಶ್ವಸಂಸ್ಥೆ, ಆಗಸ್ಟ್ 25: ಜಾಗತಿಕ ವ್ಯಾಪಾರ ಮಾರ್ಗಗಳಿಗೆ ಸಂಘರ್ಷಗಳಿಂದ ಹೆಚ್ಚುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.
ಎಲ್ಲಾ ಸಂಘರ್ಷಪಕ್ಷಗಳು ಅಂತರರಾಷ್ಟ್ರೀಯ ಕಾನೂನು, ಸಮುದ್ರ ಕಾನೂನು ಹಾಗೂ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗುಟೆರಸ್ ಒತ್ತಾಯಿಸಿದ್ದಾರೆ. ಕಪ್ಪು ಸಮುದ್ರ, ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದಲ್ಲಿ ನಾಗರಿಕ ಹಡಗುಗಳು, ಮೂಲಸೌಕರ್ಯಗಳು ಹಾಗೂ ನಾಗರಿಕ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಅವರು ಹೇಳಿದ್ದಾರೆ.
ಈ ನಡುವೆ, ಒಮಾನ್ ಸಮೀಪ ತೈಲ ಸಾಗಣೆ ಹಡಗೊಂದಕ್ಕೆ ಅಪರಿಚಿತ ಉತ್ಕ್ಷೇಪಕ ಬಡಿದಿರುವುದಾಗಿ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ ಇತರ ಹಡಗುಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇದೇ ವೇಳೆ, ಇರಾನ್ ವಿರುದ್ಧದ ತನ್ನ ನೌಕಾ ನಿರ್ಬಂಧದ ಭಾಗವಾಗಿ 71 ವಾಣಿಜ್ಯ ಹಡಗುಗಳ ಮಾರ್ಗವನ್ನು ಬದಲಾಯಿಸಲಾಗಿದೆ, ಮೂರು ಹಡಗುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ಎರಡು ಹಡಗುಗಳನ್ನು ಹತ್ತಿ ಪರಿಶೀಲಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
ಇದರ ಜೊತೆಗೆ, ಇರಾನ್‌ನ ಮಿಲಿಟರಿ ಮತ್ತು ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು 60 ಸಂಸ್ಥೆಗಳು, ವ್ಯಕ್ತಿಗಳು ಹಾಗೂ ಹಡಗುಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ.
ಜಾಗತಿಕ ಇಂಧನ ಮತ್ತು ಸರಕು ಸಾಗಣೆಗೆ ಪ್ರಮುಖವಾಗಿರುವ ಸಮುದ್ರ ಮಾರ್ಗಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಗುಟೆರಸ್ ಅವರ ಕರೆ ಮಹತ್ವ ಪಡೆದಿದೆ.


