ಮಾಲೆ: ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಗಡಿಪಾರು (Cross-Border) ತ್ವರಿತ ಹಣ ವರ್ಗಾವಣೆ ಸೇವೆ ಅಧಿಕೃತವಾಗಿ ಆರಂಭವಾಗಿದೆ. ಮಾಲ್ಡೀವ್ಸ್‌ನ ಫವಾರಾ (Favara) ತ್ವರಿತ ಪಾವತಿ ವ್ಯವಸ್ಥೆಯನ್ನು ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಜತೆಗೆ ಸಂಯೋಜಿಸುವ ಮೂಲಕ ಈ ಸೇವೆ ಜಾರಿಗೆ ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಮಾಲ್ಡೀವ್ಸ್ ಹಣಕಾಸು ಪ್ರಾಧಿಕಾರ (Maldives Monetary Authority – MMA), ಈ ವ್ಯವಸ್ಥೆಯ ಯಶಸ್ವಿ ಅನುಷ್ಠಾನವು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಡಿಜಿಟಲ್ ಹಣಕಾಸು ಸಂಪರ್ಕ ಹಾಗೂ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದೆ.
ಮಾಲ್ಡೀವ್ಸ್ ಹಣಕಾಸು ಸಚಿವಾಲಯದ ಪ್ರಕಾರ, ಹೊಸ ವ್ಯವಸ್ಥೆಯಡಿ ಮಾಲ್ಡೀವ್ಸ್‌ನಲ್ಲಿರುವ ವ್ಯಕ್ತಿಗಳು ಭಾರತದಲ್ಲಿನ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಕ್ಷಣಾರ್ಧದಲ್ಲಿ ಹಣ ವರ್ಗಾಯಿಸಬಹುದು.
ವಹಿವಾಟುಗಳನ್ನು ಮಾಲ್ಡೀವಿಯನ್ ರೂಫಿಯಾ (MVR) ಕರೆನ್ಸಿಯಲ್ಲಿ ಆರಂಭಿಸಲಾಗುತ್ತಿದ್ದು, ಹಣವು ನೇರವಾಗಿ ಭಾರತೀಯ ರೂಪಾಯಿ (INR) ರೂಪದಲ್ಲಿ UPI ಸೌಲಭ್ಯ ಹೊಂದಿರುವ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತದೆ.
ಮೊದಲ ಹಂತದಲ್ಲಿ ಈ ಸೇವೆ ಬ್ಯಾಂಕ್ ಆಫ್ ಮಾಲ್ಡೀವ್ಸ್ ಪಿಎಲ್‌ಸಿ ಹಾಗೂ ಮಾಲ್ಡೀವ್ಸ್ ಇಸ್ಲಾಮಿಕ್ ಬ್ಯಾಂಕ್ ಪಿಎಲ್‌ಸಿ ಗ್ರಾಹಕರಿಗೆ ಲಭ್ಯವಿದೆ. ಗ್ರಾಹಕರು ತಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ Favara ವೇದಿಕೆಯನ್ನು ಬಳಸಿಕೊಂಡು ವ್ಯಕ್ತಿಯಿಂದ ವ್ಯಕ್ತಿಗೆ (P2P) ಹಣ ವರ್ಗಾವಣೆ ಮಾಡಬಹುದು.
ಈ ಸೇವೆಯಡಿ ಕುಟುಂಬ ನಿರ್ವಹಣೆಗೆ ಸಂಬಂಧಿಸಿದ ಹಣ ರವಾನೆ ಹಾಗೂ ಉಡುಗೊರೆ ರೂಪದ ವಿದೇಶಿ ಹಣ ವರ್ಗಾವಣೆ ಸೇರಿದಂತೆ ಅನುಮತಿಸಲಾದ ವಿವಿಧ ವರ್ಗಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ.
ಈ ಯೋಜನೆ ಜಾರಿಯಾಗಲು ಮಾಲ್ಡೀವ್ಸ್ ಹಣಕಾಸು ಪ್ರಾಧಿಕಾರ (MMA), ಭಾರತೀಯ ರಿಸರ್ವ್ ಬ್ಯಾಂಕ್ (RBI), ಎನ್‌ಪಿಸಿಐ ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL), ಎರಡೂ ದೇಶಗಳ ಹಣಕಾಸು ಸಂಸ್ಥೆಗಳು ಹಾಗೂ ಇತರೆ ಪಾಲುದಾರ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿವೆ ಎಂದು ಸಚಿವಾಲಯ ತಿಳಿಸಿದೆ.


