ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆ 2026ರ ಸಿದ್ಧತೆಗಳ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಣ್‌ಜೀತ್ ಸಿಂಗ್ ಸಂಧು ಅವರು ಪರಿಶೀಲನಾ ಸಭೆ ನಡೆಸಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಲ್‌ಜಿ ಸಂಧು, ಶೃಂಗಸಭೆಯ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳ ನಡುವೆ ಪರಿಣಾಮಕಾರಿ ಸಮನ್ವಯ ಅಗತ್ಯ ಎಂದು ಒತ್ತಿ ಹೇಳಿದ್ದಾರೆ. ಎಲ್ಲ ಸಿದ್ಧತೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭದ್ರತೆ, ಸಂಚಾರ ವ್ಯವಸ್ಥೆಗೆ ವಿಶೇಷ ಒತ್ತು
ಪ್ರಮುಖ ಸ್ಥಳಗಳು ಹಾಗೂ ಪ್ರತಿನಿಧಿಗಳ ಸಂಚಾರ ಮಾರ್ಗಗಳಲ್ಲಿ ಸಂಚಾರ ಮತ್ತು ಭದ್ರತಾ ವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಂಧು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅದೇ ರೀತಿ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ನಾಗರಿಕ ಸೌಲಭ್ಯಗಳ ನಿರ್ವಹಣೆ, ತುರ್ತು ವೈದ್ಯಕೀಯ ಸೇವೆಗಳ ಸಿದ್ಧತೆ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಬಲಪಡಿಸುವಂತೆ ಸೂಚಿಸಿದ್ದಾರೆ.
‘ಅತಿಥಿ ದೇವೋ ಭವ’ ಆಶಯದಡಿ ಆತಿಥ್ಯ
ಭಾರತದ ಸಾಂಪ್ರದಾಯಿಕ ‘ಅತಿಥಿ ದೇವೋ ಭವ’ ಆಶಯವನ್ನು ಆಧಾರವಾಗಿಟ್ಟುಕೊಂಡು ವಿದೇಶಗಳಿಂದ ಆಗಮಿಸುವ ಎಲ್ಲಾ ಪ್ರತಿನಿಧಿಗಳಿಗೆ ಶಿಸ್ತುಬದ್ಧ, ಸುರಕ್ಷಿತ ಹಾಗೂ ಆತ್ಮೀಯ ಸ್ವಾಗತ ನೀಡಲು ದೆಹಲಿ ಸಂಪೂರ್ಣ ಸಜ್ಜಾಗಿದೆ ಎಂದು ಎಲ್‌ಜಿ ಸಂಧು ಹೇಳಿದ್ದಾರೆ.
ಶೃಂಗಸಭೆಯ ಸಂದರ್ಭದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ವಿವಿಧ ಇಲಾಖೆಗಳು ಮತ್ತು ಭದ್ರತಾ ಸಂಸ್ಥೆಗಳ ನಡುವೆ ನಿರಂತರ ಸಮನ್ವಯ ಸಾಧಿಸುವಂತೆ ಅವರು ಸೂಚಿಸಿದ್ದಾರೆ.


