ಆಧ್ಯಾತ್ಮಿಕ ಪುಸ್ತಕ ಉಡುಗೊರೆಯಾಗಿ ನೀಡಿದ ರಜನಿಕಾಂತ್: ಭಾವುಕರಾದ ನಟಿ ರಾಶಿ ಖನ್ನಾ

1 Min Read
1 Min Read

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಧರ್ಮನ್’ ಚಿತ್ರದಲ್ಲಿ ನಟಿಸುತ್ತಿರುವ ರಾಶಿ ಖನ್ನಾ, ಚಿತ್ರೀಕರಣದ ವೇಳೆ ರಜನಿಕಾಂತ್ ತಮ್ಮಗೆ ನೀಡಿದ ವಿಶೇಷ ಉಡುಗೊರೆಯ ಬಗ್ಗೆ ಬಹಿರಂಗಪಡಿಸಿದ್ದಾರೆ.

‘ಡ್ರ್ಯಾಗನ್’ ಖ್ಯಾತಿಯ ನಿರ್ದೇಶಕ ಅಶ್ವತ್ ಮಾರಿಮುತ್ತು ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ಅಭಿನಯಿಸುತ್ತಿರುವ ರಾಶಿ ಖನ್ನಾಗೆ, ಸ್ವಾಮಿ ರಾಮ ಅವರ ‘Living with the Himalayan Masters’ ಪುಸ್ತಕವನ್ನು ರಜನಿಕಾಂತ್ ಉಡುಗೊರೆಯಾಗಿ ನೀಡಿದ್ದಾರೆ.

ಈ ಕುರಿತು ವಿಡಿಯೊವೊಂದರಲ್ಲಿ ಮಾತನಾಡಿರುವ ರಾಶಿ ಖನ್ನಾ, “‘ಧರ್ಮನ್’ ಚಿತ್ರದ ಚಿತ್ರೀಕರಣದ ವೇಳೆ ರಜನಿಕಾಂತ್ ಸರ್ ಅವರೊಂದಿಗೆ ಆಧ್ಯಾತ್ಮದ ಬಗ್ಗೆ ಮಾತನಾಡುತ್ತಿದ್ದೆವು. ಆಗ ಅವರು ಈ ಪುಸ್ತಕವನ್ನು ಓದಿದ್ದೀಯಾ ಎಂದು ಕೇಳಿದರು. ನಾನು ಓದಿಲ್ಲ ಎಂದೆ. ಎರಡು ದಿನಗಳ ಬಳಿಕ ಅವರು ಸ್ವತಃ ಪುಸ್ತಕ ತಂದು ನನಗೆ ಉಡುಗೊರೆಯಾಗಿ ನೀಡಿದರು” ಎಂದು ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಈ ಪುಸ್ತಕವನ್ನು ಮನಸಾರೆ ಓದುತ್ತಿದ್ದು, ಅದರಲ್ಲಿರುವ ವಿಚಾರಗಳು ತಮ್ಮನ್ನು ಆಳವಾಗಿ ಚಿಂತನೆಗೆ ಹಚ್ಚುತ್ತಿವೆ ಎಂದು ರಾಶಿ ತಿಳಿಸಿದ್ದಾರೆ.

ರಜನಿಕಾಂತ್ ತಮಾಷೆಯಾಗಿ “ಪುಸ್ತಕ ಓದಿ ಮುಗಿಸಿದ ಬಳಿಕ ನಿನ್ನನ್ನು ಪರೀಕ್ಷಿಸುತ್ತೇನೆ” ಎಂದು ಹೇಳಿದ್ದನ್ನೂ ಅವರು ನಗುತ್ತಾ ನೆನಪಿಸಿಕೊಂಡರು.

ಪುಸ್ತಕದಲ್ಲಿರುವ ಹಲವು ವಿಚಾರಗಳು ಜೀವನದ ಬಗ್ಗೆ ಹೊಸ ದೃಷ್ಟಿಕೋನ ನೀಡುತ್ತಿವೆ ಎಂದು ಹೇಳಿದ ರಾಶಿ, ಅದರಲ್ಲಿ ತಮ್ಮನ್ನು ಹೆಚ್ಚು ಸ್ಪರ್ಶಿಸಿದ ವಿಚಾರವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಮನುಷ್ಯ ತನ್ನೊಳಗಿನ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವುದು, ಆತ್ಮಾವಲೋಕನ ಮಾಡಿಕೊಳ್ಳುವುದು ಹಾಗೂ ಧ್ಯಾನದ ಮಹತ್ವವನ್ನು ವಿವರಿಸುವ ಭಾಗವು ತಮ್ಮ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದು ಹೇಳಿದರು.

ರಜನಿಕಾಂತ್ ಅವರು ಆಧ್ಯಾತ್ಮದ ಮೇಲಿನ ಅಪಾರ ಆಸಕ್ತಿಗೆ ಹೆಸರುವಾಸಿಯಾಗಿದ್ದು, ಸಿನಿಮಾ ಚಿತ್ರೀಕರಣದ ನಡುವೆಯೂ ಅಥವಾ ಚಿತ್ರ ಬಿಡುಗಡೆಯ ನಂತರ ಹಿಮಾಲಯಕ್ಕೆ ತೆರಳಿ ಧ್ಯಾನದಲ್ಲಿ ತೊಡಗುವುದು ಅವರ ದೀರ್ಘಕಾಲದ ಅಭ್ಯಾಸವಾಗಿದೆ. ಸರಳ ಜೀವನಶೈಲಿ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Share This Article