ಚೀನಾದ ಚಾಂಗ್‌ಝೌನಲ್ಲಿ ನಡೆಯುತ್ತಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಹಾಗೂ ಆಯುಷ್ ಶೆಟ್ಟಿ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ (ರೌಂಡ್ ಆಫ್ 16) ಪ್ರವೇಶಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು, ಮಹಿಳೆಯರ ಸಿಂಗಲ್ಸ್‌ನ 32ರ ಸುತ್ತಿನ ಪಂದ್ಯದಲ್ಲಿ ಭಾರತದವೇ ಉನ್ನತಿ ಹೂಡಾ ಅವರನ್ನು 21-14, 9-21, 21-10 ಅಂತರದಿಂದ ಮಣಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಯುಷ್ ಶೆಟ್ಟಿ, ವಿಶ್ವದ 11ನೇ ಶ್ರೇಯಾಂಕದ ಇಂಡೋನೇಷ್ಯಾದ ಅಲ್ವಿ ಫರ್ಹಾನ್ ವಿರುದ್ಧ 21-17, 5-21, 21-17 ಅಂತರದಲ್ಲಿ ಗೆದ್ದು ಪ್ರೀಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.
ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್, ಜಪಾನ್‌ನ ಯುಶಿ ತನಾಕಾ ಅವರನ್ನು 22-20, 15-21, 21-14 ಅಂತರದಿಂದ ಸೋಲಿಸಿ ಕೊನೆಯ 16ರ ಸುತ್ತಿನಲ್ಲಿ ಸ್ಥಾನ ಖಚಿತಪಡಿಸಿಕೊಂಡರು.
ಆದರೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಎಂ.ಆರ್. ಅರ್ಜುನ್ ಮತ್ತು ಹರಿಹರನ್ ಅಂಸಕರೂಣನ್ ಜೋಡಿ ಆತಿಥೇಯ ಚೀನಾದ ವಾಂಗ್ ಚಾಂಗ್ ಮತ್ತು ಲಿಯಾಂಗ್ ವೈಕೆಂಗ್ ವಿರುದ್ಧ 16-21, 7-21 ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಕಪೂರ್ ಮತ್ತು ರುತ್ವಿಕಾ ಶಿವಾನಿ ಗಡ್ಡೆ ಜೋಡಿ ಚೀನಾದ ಫೆಂಗ್ ಯಾನ್‌ಝೆ ಹಾಗೂ ಹುವಾಂಗ್ ಡಾಂಗ್‌ಪಿಂಗ್ ವಿರುದ್ಧ 9-21, 16-21 ಅಂತರದಿಂದ ಸೋಲನುಭವಿಸಿತು.
ಇದೇ ವಿಭಾಗದಲ್ಲಿ ಭಾರತದ ತನಿಶಾ ಕ್ರಾಸ್ಟೋ ಮತ್ತು ಧ್ರುವ್ ಕಪಿಲಾ ಜೋಡಿಯೂ ಚೀನಾದ ಎದುರು ಸೋತು ಟೂರ್ನಿಗೆ ವಿದಾಯ ಹೇಳಿತು.


