ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾ ವಿರುದ್ಧ ನೌಕಾ ನಿರ್ಬಂಧ (Naval Blockade) ಘೋಷಿಸಿರುವ ಬೆನ್ನಲ್ಲೇ, ಕೆಂಪು ಸಮುದ್ರ (Red Sea) ಮೂಲಕ ಸಾಗುವ ವಾಣಿಜ್ಯ ಹಡಗುಗಳಿಗೆ ಎದುರಾಗಿರುವ ಬೆದರಿಕೆಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, ಸೌದಿ ಅರೇಬಿಯಾ ವಿರುದ್ಧ ಹೌತಿಗಳು ಕೈಗೊಂಡಿರುವ ನೌಕಾ ನಿರ್ಬಂಧದ ಹಿಂದೆ ಇರಾನ್‌ನ ಬೆಂಬಲವಿದೆ ಎಂದು ಆರೋಪಿಸಿದರು. ಆದರೆ ಈ ಉದ್ವಿಗ್ನತೆ ಮತ್ತಷ್ಟು ಹೆಚ್ಚದಂತೆ ಪರಿಸ್ಥಿತಿಯನ್ನು ಶಮನಗೊಳಿಸಬಹುದೆಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದರು.
ಫಿಲಿಪ್ಪೀನ್ಸ್‌ನಲ್ಲಿ ನಡೆದ ಪ್ರಾದೇಶಿಕ ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ರೂಬಿಯೊ, ಕೆಂಪು ಸಮುದ್ರದ ಮೂಲಕ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾದರೂ ಅದು ಜಾಗತಿಕ ವ್ಯಾಪಾರಕ್ಕೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಅವರು, ಹೋರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿಯಂತೆ ಕೆಂಪು ಸಮುದ್ರದಲ್ಲೂ ಸಾಗಣೆ ವ್ಯತ್ಯಯ ಉಂಟಾಗುವುದು ಜಾಗತಿಕ ಆರ್ಥಿಕತೆಗೆ ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದರು. ಪರಿಸ್ಥಿತಿಯ ಮೇಲೆ ಅಮೆರಿಕ ಸರ್ಕಾರ ನಿರಂತರ ನಿಗಾ ವಹಿಸಿದೆ ಎಂದರು.
ಹೌತಿ ಸಂಘಟನೆ, ಬಾಬ್ ಅಲ್-ಮಂಡೆಬ್ ಜಲಸಂಧಿ (Bab el-Mandeb Strait) ಮೂಲಕ ಸಂಚರಿಸುವುದನ್ನು ತಪ್ಪಿಸುವಂತೆ ಸೋಮವಾರ ಅಂತರರಾಷ್ಟ್ರೀಯ ಹಡಗು ಸಾಗಣೆ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ಈ ಜಲಸಂಧಿಯು ಕೆಂಪು ಸಮುದ್ರಕ್ಕೆ ಪ್ರವೇಶಿಸುವ ಪ್ರಮುಖ ಸಮುದ್ರ ಮಾರ್ಗವಾಗಿದ್ದು, ಜಾಗತಿಕ ವ್ಯಾಪಾರ ಮತ್ತು ತೈಲ ಸಾಗಣೆಗೆ ಅತ್ಯಂತ ಮಹತ್ವದ್ದಾಗಿದೆ.
ಇದೇ ವೇಳೆ, ವಿಶ್ವದ ಸುಮಾರು ಐದನೇ ಒಂದು ಭಾಗದ ತೈಲ ಸಾಗಣೆ ನಡೆಯುವ ಹೋರ್ಮುಜ್ ಜಲಸಂಧಿ (Strait of Hormuz), ಇರಾನ್‌ನಲ್ಲಿ ಫೆಬ್ರವರಿ 28ರಿಂದ ಆರಂಭವಾದ ಯುದ್ಧದ ಬಳಿಕ ಸಂಪೂರ್ಣ ಅಥವಾ ಭಾಗಶಃ ಬಂದ್ ಆಗಿರುವುದರಿಂದ ಜಾಗತಿಕ ಇಂಧನ ಸರಬರಾಜಿನ ಮೇಲೂ ಆತಂಕ ಮುಂದುವರಿದಿದೆ.


