ಜಿಂದ್ (ಹರಿಯಾಣ): ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಜಿಂದ್–ಸೋನಿಪತ್ ಮಾರ್ಗದ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಅಧಿಕೃತ ಚಾಲನೆ ನೀಡಿದರು. ಈ ಮೂಲಕ ಭಾರತೀಯ ರೈಲ್ವೆ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಸಾರಿಗೆ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ₹12,470 ಕೋಟಿಗೂ ಅಧಿಕ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಹೊಸ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ 157 ಕಿ.ಮೀ ಉದ್ದದ ದೆಹಲಿ–ಅಮೃತಸರ–ಕತ್ರಾ ಎಕ್ಸ್ಪ್ರೆಸ್ವೇಯನ್ನೂ ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ಪೂರ್ಣಗೊಂಡ ಬಳಿಕ ದೆಹಲಿ–ಕತ್ರಾ ಪ್ರಯಾಣದ ಅವಧಿ ಸುಮಾರು 14 ಗಂಟೆಯಿಂದ 6 ಗಂಟೆಗೆ ಹಾಗೂ ದೆಹಲಿ–ಅಮೃತಸರ ಪ್ರಯಾಣ 8 ಗಂಟೆಯಿಂದ ಸುಮಾರು 4 ಗಂಟೆಗೆ ಇಳಿಕೆಯಾಗಲಿದೆ.
‘ಜಿಂದ್ಗೆ ಇತಿಹಾಸದಲ್ಲಿ ವಿಶೇಷ ಸ್ಥಾನ’
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ 12 ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಮಹತ್ತರ ಬದಲಾವಣೆಗಳು ನಡೆದಿವೆ ಎಂದು ಹೇಳಿದರು. ಹರಿಯಾಣವೂ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ದೇಶದ ಮೊದಲ ಹೈಡ್ರೋಜನ್ ರೈಲು ಆರಂಭವಾಗುವ ಮೂಲಕ ಜಿಂದ್ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಅವರು ಹೇಳಿದರು.
21ನೇ ಶತಮಾನದ ರೈಲ್ವೆ ವ್ಯವಸ್ಥೆ ಹೈಡ್ರೋಜನ್ ತಂತ್ರಜ್ಞಾನದ ಮೇಲೆ ಸಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಜಿಂದ್–ಸೋನಿಪತ್ ನಡುವಿನ ಸುಮಾರು 90 ಕಿ.ಮೀ ಮಾರ್ಗದಲ್ಲಿ ಹೈಡ್ರೋಜನ್ ರೈಲು ಸೇವೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ವಿಶ್ವದಲ್ಲಿ ಕೇವಲ ಮೂರು ಅಥವಾ ನಾಲ್ಕು ದೇಶಗಳಷ್ಟೇ ಹೈಡ್ರೋಜನ್ ರೈಲುಗಳನ್ನು ಯಶಸ್ವಿಯಾಗಿ ಸಂಚರಿಸುತ್ತಿವೆ. 3,200 ಹಾರ್ಸ್ಪವರ್ ಸಾಮರ್ಥ್ಯ ಹೊಂದಿರುವ ಭಾರತದ ಹೈಡ್ರೋಜನ್ ರೈಲು ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಉದ್ದವಾದ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು.
‘ಸ್ವದೇಶಿ ತಂತ್ರಜ್ಞಾನದ ಐತಿಹಾಸಿಕ ಸಾಧನೆ’
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ದೇಶದ ಮೊದಲ ಹೈಡ್ರೋಜನ್ ರೈಲಿನ ಆರಂಭವು ಭಾರತದ ತಾಂತ್ರಿಕ ಸಾಮರ್ಥ್ಯದ ಐತಿಹಾಸಿಕ ಸಾಧನೆಯಾಗಿದೆ ಎಂದರು.
ಸ್ವದೇಶಿ ಹೈಡ್ರೋಜನ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ರಾಷ್ಟ್ರೀಯ ಸಂಕಲ್ಪದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಈ ರೈಲು ಡೀಸೆಲ್ ಅಥವಾ ಪೆಟ್ರೋಲ್ ಅಗತ್ಯವಿಲ್ಲದ ಸಂಪೂರ್ಣ ಪರಿಸರ ಸ್ನೇಹಿ ರೈಲು ಎಂದು ಅವರು ತಿಳಿಸಿದರು.
ಹರಿಯಾಣದಲ್ಲಿ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ರಾಜ್ಯದ ರೈಲ್ವೆ ಬಜೆಟ್ ₹315 ಕೋಟಿಯಿಂದ ಸುಮಾರು ₹3,500 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ, ರಾಜ್ಯದಲ್ಲಿ ₹18,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ
ಭಾರತದಲ್ಲೇ ವಿನ್ಯಾಸ, ಎಂಜಿನಿಯರಿಂಗ್ ಮತ್ತು ತಯಾರಿಸಲಾದ ಈ ರೈಲು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಜಿಂದ್–ಸೋನಿಪತ್ ಮಾರ್ಗದಲ್ಲಿ ಗಂಟೆಗೆ 75 ಕಿ.ಮೀ ಕಾರ್ಯಾಚರಣಾ ವೇಗ ಹಾಗೂ 110 ಕಿ.ಮೀ ವಿನ್ಯಾಸ ವೇಗ ಹೊಂದಿರುವ ಈ ರೈಲು, ಸುರಕ್ಷತೆ ಮತ್ತು ವೇಗ ಎರಡರಲ್ಲೂ ಹೊಸ ಮಾನದಂಡ ಸ್ಥಾಪಿಸಿದೆ.
ಈ ರೈಲು ಆರಂಭದೊಂದಿಗೆ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕ ನಂತರ ಕಾರ್ಯಾಚರಣೆಯಲ್ಲಿರುವ ಹೈಡ್ರೋಜನ್ ರೈಲು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ.
ವಿಶ್ವದ ಹೆಚ್ಚಿನ ಹೈಡ್ರೋಜನ್ ರೈಲುಗಳು ಸಾಮಾನ್ಯವಾಗಿ 2 ಅಥವಾ 3 ಬೋಗಿಗಳಷ್ಟೇ ಹೊಂದಿದ್ದರೆ, ಭಾರತೀಯ ರೈಲ್ವೆಯ ಹೈಡ್ರೋಜನ್ ರೈಲು 10 ಬೋಗಿಗಳೊಂದಿಗೆ ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಶೂನ್ಯ ಕಾರ್ಬನ್ ಹೊರಸೂಸುವಿಕೆ
ಈ ರೈಲು ಹೈಡ್ರೋಜನ್ ಫ್ಯುಯೆಲ್ ಸೆಲ್ ತಂತ್ರಜ್ಞಾನ ಬಳಸಿ ವಿದ್ಯುತ್ ಉತ್ಪಾದಿಸಿ ಸಂಚರಿಸುತ್ತದೆ. ಇದರ ಕಾರ್ಯಾಚರಣೆಯಲ್ಲಿ ನೀರಿನ ಆವಿ ಮಾತ್ರ ಹೊರಬರುವುದರಿಂದ ಕಾರ್ಬನ್ ಹೊರಸೂಸುವಿಕೆ ಶೂನ್ಯವಾಗಿರುತ್ತದೆ.
ರೈಲಿನಲ್ಲಿ ಹೈಡ್ರೋಜನ್ ಸೋರಿಕೆ, ಬೆಂಕಿ, ಹೊಗೆ ಹಾಗೂ ಅಧಿಕ ಉಷ್ಣಾಂಶ ಪತ್ತೆಹಚ್ಚುವ ಬಹುಹಂತದ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ. ಜಿಂದ್ನಲ್ಲಿ ವಿಶೇಷ ಹೈಡ್ರೋಜನ್ ಘಟಕವನ್ನು ಸ್ಥಾಪಿಸಲಾಗಿದ್ದು, ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾರ್ಯಾಚರಣೆಗೆ ಇದು ನೆರವಾಗಲಿದೆ.
ಭಾರತೀಯ ರೈಲ್ವೆ, ಜಿಂದ್–ಸೋನಿಪತ್ ಯೋಜನೆಯ ಅನುಭವದ ಆಧಾರದ ಮೇಲೆ ಕಾಲ್ಕಾ–ಶಿಮ್ಲಾ ಹೆರಿಟೇಜ್ ರೈಲು ಮಾರ್ಗ ಸೇರಿದಂತೆ ಇತರ ಮಾರ್ಗಗಳಲ್ಲಿಯೂ ಹೈಡ್ರೋಜನ್ ತಂತ್ರಜ್ಞಾನ ಬಳಕೆಯ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.


