ದೇಶದಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವೈದ್ಯಕೀಯ ಕಾಲೇಜುಗಳು, ಪದವಿ (UG) ಹಾಗೂ ಸ್ನಾತಕೋತ್ತರ (PG) ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, 2014ರಿಂದ ಇದುವರೆಗೆ ದೇಶದಲ್ಲಿನ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387ರಿಂದ 844ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಅವಧಿಯಲ್ಲಿ MBBS (UG) ಸೀಟುಗಳ ಸಂಖ್ಯೆ 51,348ರಿಂದ 1,39,489ಕ್ಕೆ ಹಾಗೂ PG ವೈದ್ಯಕೀಯ ಸೀಟುಗಳ ಸಂಖ್ಯೆ 31,185ರಿಂದ 86,360ಕ್ಕೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ದೇಶದ ದೂರದ ಮತ್ತು ವೈದ್ಯಕೀಯ ಸೌಲಭ್ಯಗಳಿಂದ ವಂಚಿತ ಪ್ರದೇಶಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿರುವುದು ಹಾಗೂ MBBS ಸೀಟುಗಳನ್ನು ಹೆಚ್ಚಿಸಿರುವುದರಿಂದ ವೈದ್ಯರ ಲಭ್ಯತೆ ಹೆಚ್ಚಾಗಿ, ಆರೋಗ್ಯ ಸೇವೆ ಮತ್ತಷ್ಟು ಸುಧಾರಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಇದಲ್ಲದೆ, ಗ್ರಾಮೀಣ ಜನರಿಗೆ ಸಮಾನ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕುಟುಂಬ ದತ್ತು ಕಾರ್ಯಕ್ರಮ (Family Adoption Programme – FAP) ಅನ್ನು MBBS ಪಠ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಅನುಪ್ರಿಯಾ ಪಟೇಲ್ ತಿಳಿಸಿದರು.
ಈ ಯೋಜನೆಯಡಿ ವೈದ್ಯಕೀಯ ಕಾಲೇಜುಗಳು ಗ್ರಾಮಗಳನ್ನು ದತ್ತು ಪಡೆಯಲಿದ್ದು, MBBS ವಿದ್ಯಾರ್ಥಿಗಳು ಆ ಗ್ರಾಮಗಳಲ್ಲಿನ ಕುಟುಂಬಗಳನ್ನು ದತ್ತು ಪಡೆದು ಆರೋಗ್ಯ ಸೇವೆ ಮತ್ತು ಸಮುದಾಯ ಆರೋಗ್ಯದ ಬಗ್ಗೆ ಪ್ರಾಯೋಗಿಕ ಅನುಭವ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.


