ನವದೆಹಲಿ/ಜಿಂದ್ (ಹರಿಯಾಣ): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣ, ಚಂಡೀಗಢ ಹಾಗೂ ಪಂಜಾಬ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ಜಿಂದ್–ಸೋನಿಪತ್ ಮಾರ್ಗದಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಚಾಲನೆ ನೀಡಲಿದ್ದಾರೆ.
ಈ ಐತಿಹಾಸಿಕ ಯೋಜನೆಯೊಂದಿಗೆ ಭಾರತೀಯ ರೈಲ್ವೆ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಸಾರಿಗೆ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆಯಿಡುತ್ತಿದೆ. ಭಾರತದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾದ ಈ ರೈಲು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ಆಧಾರದಲ್ಲಿ ನಿರ್ಮಾಣವಾಗಿದ್ದು, ಸುಧಾರಿತ ರೈಲ್ವೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುತ್ತದೆ.
ಹೈಡ್ರೋಜನ್ ರೈಲು ಸೇವೆ ಆರಂಭವಾಗುವುದರೊಂದಿಗೆ, ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕ ನಂತರ ಕಾರ್ಯಾಚರಣೆಯಲ್ಲಿರುವ ಹೈಡ್ರೋಜನ್ ರೈಲು ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ.
ವಿಶೇಷವೆಂದರೆ, ಜರ್ಮನಿ ಹಾಗೂ ಚೀನಾ ಸಾಮಾನ್ಯವಾಗಿ 2 ಅಥವಾ 3 ಬೋಗಿಗಳ ಹೈಡ್ರೋಜನ್ ರೈಲುಗಳನ್ನು ಬಳಸುತ್ತಿದ್ದರೆ, ಭಾರತ 10 ಬೋಗಿಗಳ ರೈಲನ್ನು ಅಭಿವೃದ್ಧಿಪಡಿಸಿದೆ. ಈ ರೈಲು ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಸಾಮರ್ಥ್ಯದ ಹೈಡ್ರೋಜನ್ ರೈಲುಗಳಲ್ಲಿ ಒಂದಾಗಿದೆ.
ಈ ರೈಲು 3,200 ಹಾರ್ಸ್ಪವರ್ ಪ್ರೊಪಲ್ಷನ್ ವ್ಯವಸ್ಥೆ ಹೊಂದಿದ್ದು, ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ಚಾಲಿತ ರೈಲುಗಳಲ್ಲಿ ಒಂದಾಗಿದೆ. ಹೈಡ್ರೋಜನ್ ಫ್ಯುಯೆಲ್ ಸೆಲ್ ತಂತ್ರಜ್ಞಾನದ ಮೂಲಕ ವಿದ್ಯುತ್ ಉತ್ಪಾದಿಸಿ ರೈಲನ್ನು ಚಲಾಯಿಸಲಾಗುತ್ತದೆ. ಇದರ ಕಾರ್ಯಾಚರಣೆಯಲ್ಲಿ ನೀರಿನ ಆವಿಯಷ್ಟೇ ಹೊರಬರುವುದರಿಂದ ಕಾರ್ಬನ್ ಹೊರಸೂಸುವಿಕೆ ಶೂನ್ಯವಾಗಿರುತ್ತದೆ.
ಸಾಂಪ್ರದಾಯಿಕ ವಿದ್ಯುತ್ ರೈಲುಗಳಂತೆ ನಿರಂತರ ಮೇಲ್ದಾರಿ ವಿದ್ಯುತ್ ತಂತಿಗಳ ಅಗತ್ಯವಿಲ್ಲದೆ, ರೈಲಿನಲ್ಲೇ ವಿದ್ಯುತ್ ಉತ್ಪಾದನೆಯಾಗುವುದರಿಂದ ಇದು ಪರಿಸರ ಸ್ನೇಹಿ ಹಾಗೂ ಇಂಧನ ದಕ್ಷತೆಯ ಸಾರಿಗೆ ವ್ಯವಸ್ಥೆಯಾಗಿದೆ.
ರೈಲಿನಲ್ಲಿ ಹೈಡ್ರೋಜನ್ ಸೋರಿಕೆ, ಬೆಂಕಿ, ಹೊಗೆ ಹಾಗೂ ಅಧಿಕ ಉಷ್ಣಾಂಶವನ್ನು ಪತ್ತೆಹಚ್ಚುವ ಬಹುಹಂತದ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ. ಸುರಕ್ಷಿತ ಕಾರ್ಯಾಚರಣೆಗಾಗಿ ಜಿಂದ್ನಲ್ಲಿ ವಿಶೇಷ ಹೈಡ್ರೋಜನ್ ಸೌಲಭ್ಯವನ್ನೂ ಸ್ಥಾಪಿಸಲಾಗಿದೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜಿಂದ್ನ ಏಕಲವ್ಯ ಕ್ರೀಡಾಂಗಣದಲ್ಲಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ಕೆಲವು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಚಂಡೀಗಢದಲ್ಲಿ ₹4,700 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರವಾಸದ ಅಂತಿಮ ಹಂತದಲ್ಲಿ ಪ್ರಧಾನಿ ಪಂಜಾಬ್ನ ಜಲಂಧರ್ಗೆ ಭೇಟಿ ನೀಡಿ, ₹5,470 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.


