ನವದೆಹಲಿ: ಪವಿತ್ರ ಶ್ರೀ ಜಗನ್ನಾಥ ರಥಯಾತ್ರೆ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಭವ್ಯ ರಥಯಾತ್ರೆಯ ಸಂದರ್ಭದಲ್ಲಿ ಮಹಾಪ್ರಭು ಶ್ರೀ ಜಗನ್ನಾಥ, ಚಕ್ರರಾಜ ಸುದರ್ಶನ, ಬಲಭದ್ರ ಹಾಗೂ ದೇವಿ ಸುಭದ್ರಾ ಭಕ್ತರಿಗೆ ದರ್ಶನ ನೀಡಲು ಹೊರಬರುತ್ತಾರೆ ಎಂದು ತಿಳಿಸಿದ್ದಾರೆ. ಮಹಾಪ್ರಭು ಜಗನ್ನಾಥರ ಆಶೀರ್ವಾದದಿಂದ ದೇಶದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಅವರು ಹಾರೈಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗನ್ನಾಥ ರಥಯಾತ್ರೆಯನ್ನು ಭಾರತದ ಶಾಶ್ವತ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಎಂದು ಬಣ್ಣಿಸಿದ್ದಾರೆ. ಈ ಹಬ್ಬವು ವಿನಮ್ರತೆ, ಸಾಮೂಹಿಕ ಭಾಗವಹಿಸುವಿಕೆ ಹಾಗೂ ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿರುವ ಅವರು, ದೇಶದ ಪ್ರತಿಯೊಬ್ಬರಿಗೂ ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಅಚಲ ನಂಬಿಕೆ, ಭಕ್ತಿ ಮತ್ತು ವಿಶ್ವಾಸದ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಈ ಪವಿತ್ರ ರಥಯಾತ್ರೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದ್ದು, ದೇಶದ ಪ್ರತಿಯೊಬ್ಬರಿಗೂ ಸುಖ, ಶಾಂತಿ ಹಾಗೂ ಸಮೃದ್ಧಿ ಸಿಗಲೆಂದು ಹಾರೈಸಿದ್ದಾರೆ.


