ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆ ನಾಫ್ಟೊಗಾಜ್ (Naftogaz) ಮುಖ್ಯಸ್ಥ ಸೆರ್ಗಿ ಕೊರೇಟ್ಸ್ಕಿ (Sergii Koretskyi) ಅವರನ್ನು ದೇಶದ ಹೊಸ ಪ್ರಧಾನಿಯಾಗಿ ಶಿಫಾರಸು ಮಾಡಿದ್ದಾರೆ.
ಕೇವಲ ಒಂದು ವರ್ಷ ಅಧಿಕಾರದಲ್ಲಿದ್ದ ಪ್ರಧಾನಿ ಯುಲಿಯಾ ಸ್ವಿರಿಡೆಂಕೊ (Yulia Svyrydenko) ಅವರನ್ನು ಈ ವಾರ ಹುದ್ದೆಯಿಂದ ಬದಲಾಯಿಸಲಾಗಿತ್ತು. ಅವರ ರಾಜೀನಾಮೆಯನ್ನು ಉಕ್ರೇನ್ ಸಂಸತ್ತು ಮಂಗಳವಾರ ಅಂಗೀಕರಿಸಿದ್ದು, ಹೊಸ ಪ್ರಧಾನಿಯ ನೇಮಕಕ್ಕೆ ಇಂದು ಮತದಾನ ನಡೆಯುವ ನಿರೀಕ್ಷೆಯಿದೆ.
ಈ ನಾಯಕತ್ವ ಬದಲಾವಣೆಯ ಕುರಿತು ಹೆಚ್ಚಿನ ವಿವರ ನೀಡದ ಅಧ್ಯಕ್ಷ ಜೆಲೆನ್ಸ್ಕಿ, ದೇಶದ ಆಡಳಿತಕ್ಕೆ ಹೊಸ ಚೈತನ್ಯ ಮತ್ತು ನಾಯಕತ್ವ ನೀಡುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಕೀವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಲೆನ್ಸ್ಕಿ, ಮುಂಬರುವ ಚಳಿಗಾಲದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸುವುದು ಉಕ್ರೇನ್‌ನ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶವನ್ನು ಮುನ್ನಡೆಸಲು ಸೆರ್ಗಿ ಕೊರೇಟ್ಸ್ಕಿ ಅತ್ಯುತ್ತಮ ಅಭ್ಯರ್ಥಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.


