ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ದಾಸ್ತಾನು ಮತ್ತು ಬೆಲೆ ಪರಿಸ್ಥಿತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಕ್ಕರೆ ವ್ಯಾಪಾರಿಗಳ ದಾಸ್ತಾನು ಮಿತಿಯನ್ನು 4,000 ಕ್ವಿಂಟಾಲ್‌ನಿಂದ 2,000 ಕ್ವಿಂಟಾಲ್‌ಗೆ ಇಳಿಸಿದೆ.
ಹೊಸ ನಿಯಮವು ಈ ತಿಂಗಳ 15ರಿಂದ ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ. ಸಕ್ಕರೆ ದಾಸ್ತಾನು ಮಾಡಿಟ್ಟುಕೊಂಡು ಕೃತಕ ಕೊರತೆ ಸೃಷ್ಟಿಸುವುದು ಹಾಗೂ ಊಹಾಪೋಹದ ವ್ಯಾಪಾರವನ್ನು ತಡೆಯುವುದು, ಗ್ರಾಹಕರ ಹಿತ ಕಾಪಾಡುವುದು ಮತ್ತು ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆ ಹಾಗೂ ಬೆಲೆ ಸ್ಥಿರತೆ ಖಚಿತಪಡಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಆಗಸ್ಟ್ 1ರಿಂದ ದೇಶಾದ್ಯಂತ ಸಕ್ಕರೆ ವ್ಯಾಪಾರಿಗಳಿಗೆ 4,000 ಕ್ವಿಂಟಾಲ್ ದಾಸ್ತಾನು ಮಿತಿ ಜಾರಿಯಲ್ಲಿತ್ತು. ಪರಿಷ್ಕೃತ ನಿಯಮಗಳ ಪ್ರಕಾರ, ವ್ಯಾಪಾರಿಗಳು ಖರೀದಿಸಿದ ಸಕ್ಕರೆಯನ್ನು ಸ್ವೀಕರಿಸಿದ ದಿನದಿಂದ 30 ದಿನಗಳಿಗಿಂತ ಹೆಚ್ಚು ಕಾಲ ದಾಸ್ತಾನಿನಲ್ಲಿ ಇಡಲು ಅವಕಾಶ ಇರುವುದಿಲ್ಲ. ಅಲ್ಲದೆ, ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಮಯದಲ್ಲೂ 2,000 ಕ್ವಿಂಟಾಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದುವಂತಿಲ್ಲ.
ಆದರೆ ಕೊಲ್ಕತ್ತಾ ಮತ್ತು ಅದರ ವಿಸ್ತರಿತ ಮಹಾನಗರ ಪ್ರದೇಶಗಳಿಗೆ 4,000 ಕ್ವಿಂಟಾಲ್ ದಾಸ್ತಾನು ಮಿತಿ ಮುಂದುವರಿಯಲಿದೆ. ಈ ಪ್ರದೇಶದ ನಿರ್ದಿಷ್ಟ ಮಾರುಕಟ್ಟೆ ಅಗತ್ಯಗಳನ್ನು ಪರಿಗಣಿಸಿ ಸರ್ಕಾರ ಈ ವಿನಾಯಿತಿ ನೀಡಿದೆ.
ಕೊಲ್ಕತ್ತಾ ಪ್ರದೇಶವು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಸಕ್ಕರೆಯನ್ನು ಸಂಗ್ರಹಿಸಿ, ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಪೂರ್ವ ಭಾಗಗಳಿಗೆ ಪೂರೈಕೆ ಮಾಡುತ್ತದೆ. ಹೀಗಾಗಿ ಈ ಪ್ರದೇಶದ ಮಾರುಕಟ್ಟೆ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು 4,000 ಕ್ವಿಂಟಾಲ್‌ನ ಹಿಂದಿನ ಮಿತಿಯನ್ನೇ ಮುಂದುವರಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಸಮರ್ಪಕ ಲಭ್ಯತೆ, ಸುಗಮ ಪೂರೈಕೆ ಮತ್ತು ಬೆಲೆ ಸ್ಥಿರತೆ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಸಚಿವಾಲಯ ಭರವಸೆ ನೀಡಿದೆ.
ಅದೇ ವೇಳೆ, ನೈಜ ಹಾಗೂ ನಿಯಮಾನುಸಾರ ನಡೆಯುವ ಸಕ್ಕರೆ ವ್ಯಾಪಾರ ಮತ್ತು ವಿತರಣಾ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.


