ಮುಂಬೈ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮುಂಬೈನಲ್ಲಿ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ, ಇತ್ತೀಚೆಗೆ ನಡೆದ ಬಲ ಭುಜದ ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯ ಮತ್ತು ಚೇತರಿಕೆ ಕುರಿತು ಮಾಹಿತಿ ಪಡೆದರು.
ಕಳೆದ ಕೆಲವು ವಾರಗಳಿಂದ ತೀವ್ರ ಭುಜ ನೋವಿನಿಂದ ಬಳಲುತ್ತಿದ್ದ ಪವನ್ ಕಲ್ಯಾಣ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ಎರಡೂ ಭುಜಗಳ ರೋಟೇಟರ್ ಕಫ್ (Rotator Cuff) ಭಾಗದಲ್ಲಿ ಗಂಭೀರ ಗಾಯಗಳಿರುವುದು ಪತ್ತೆಯಾಗಿತ್ತು. ಶೀಘ್ರದಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು.
ಆದರೆ, ಪೂರ್ವನಿಗದಿತ ಸರ್ಕಾರಿ ಹಾಗೂ ರಾಜಕೀಯ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕವೇ ಶಸ್ತ್ರಚಿಕಿತ್ಸೆ ನಡೆಸುವಂತೆ ಪವನ್ ಕಲ್ಯಾಣ್ ವೈದ್ಯರನ್ನು ಮನವಿ ಮಾಡಿದ್ದರು. ಅದರಂತೆ, ಶನಿವಾರ ಬೆಳಿಗ್ಗೆ ಮುಂಬೈನಲ್ಲಿ ಬಲ ಭುಜಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈ ಪ್ರಕ್ರಿಯೆ ಸುಮಾರು ಮೂರೂವರೆ ಗಂಟೆಗಳ ಕಾಲ ನಡೆಯಿತು.
ವೈದ್ಯರ ಪ್ರಕಾರ, ಎರಡೂ ಭುಜಗಳಿಗೆ ಒಂದೇ ವೇಳೆ ಶಸ್ತ್ರಚಿಕಿತ್ಸೆ ನಡೆಸಿದರೆ ಚೇತರಿಕೆ ಅವಧಿಯಲ್ಲಿ ತೀವ್ರ ನೋವು ಉಂಟಾಗುವ ಸಾಧ್ಯತೆ ಇರುವುದರಿಂದ ಮೊದಲ ಹಂತದಲ್ಲಿ ಬಲ ಭುಜಕ್ಕೆ ಮಾತ್ರ ಚಿಕಿತ್ಸೆ ನೀಡಲಾಗಿದೆ. ಎಡ ಭುಜದ ಶಸ್ತ್ರಚಿಕಿತ್ಸೆಯನ್ನು ಸುಮಾರು ಎರಡು ತಿಂಗಳ ಬಳಿಕ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
2016ರಿಂದಲೂ ಭುಜದ ಸಮಸ್ಯೆ
ಪವನ್ ಕಲ್ಯಾಣ್ ಅವರಿಗೆ ಮೊದಲ ಬಾರಿಗೆ 2016ರಲ್ಲಿ ಭುಜಕ್ಕೆ ಗಾಯವಾಗಿತ್ತು. ಆರಂಭಿಕ ಚಿಕಿತ್ಸೆ ಬಳಿಕ ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರೂ, ಅವರು ರಾಜಕೀಯ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದರು.
2018ರಲ್ಲಿ ಜನಸೇನಾ ಪಕ್ಷದ ಕಾರ್ಯಕ್ರಮಗಳ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಕೈಕುಲುಕಿ, ಆತ್ಮೀಯವಾಗಿ ಅಪ್ಪಿಕೊಳ್ಳುತ್ತಿದ್ದ ಕಾರಣ ಗಾಯ ಮತ್ತಷ್ಟು ಉಲ್ಬಣಗೊಂಡಿತು. 2019ರ ಚುನಾವಣೆಯ ಬಳಿಕವೂ ರೈತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡುವ ಕಾರ್ಯಕ್ರಮಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದ ಪರಿಣಾಮ, ಭುಜದ ಗಾಯ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.


