‘ಮಹಾನ್’ ಚಿತ್ರದಲ್ಲಿ ವಕೀಲನಾಗಿ ಶಿವರಾಜ್ಕುಮಾರ್ ಎಂಟ್ರಿ; ವಿಜಯ್ ರಾಘವೇಂದ್ರಗೆ ಸಾಥ್
ನಟ ವಿಜಯ್ ರಾಘವೇಂದ್ರ ರೈತನ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಮಹಾನ್’ ಚಿತ್ರಕ್ಕೆ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸೇರ್ಪಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆಕಾಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಎಸ್. ಬುಡೂರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ಮಿತ್ರಾ, ನಮ್ರತಾ ಗೌಡ, ವರ್ಷಾ ಬೊಳ್ಳಮ್ಮ ಹಾಗೂ ಕಿರಣ್ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರೈತರ ಬದುಕು, ಅವರ ಹೋರಾಟ ಮತ್ತು ಬದುಕಿನ ಸ್ಥೈರ್ಯವನ್ನು ಕೇಂದ್ರಬಿಂದುವಾಗಿಸಿಕೊಂಡಿರುವ ‘ಮಹಾನ್’ ಚಿತ್ರದಲ್ಲಿ ಶಿವರಾಜ್ಕುಮಾರ್ ವಕೀಲರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುಗಡೆಯಾದ ಅವರ ಫಸ್ಟ್ಲುಕ್ ಪೋಸ್ಟರ್ ಗಮನ ಸೆಳೆದಿದ್ದು, ಕಥೆಯಲ್ಲಿ ಅವರ ಪಾತ್ರ ಪ್ರಮುಖ ತಿರುವು ನೀಡುವ ಜೊತೆಗೆ ಭಾವನಾತ್ಮಕ ಹಾಗೂ ನಾಟಕೀಯ ಅಂಶಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎನ್ನಲಾಗಿದೆ.
ಚಿತ್ರದ ನಿರ್ದೇಶಕ ಶೇಖರ್ ಮಾತನಾಡಿ, ಆರಂಭದಿಂದಲೇ ಈ ಪಾತ್ರಕ್ಕೆ ಶಿವರಾಜ್ಕುಮಾರ್ ಅವರನ್ನು ಆಯ್ಕೆ ಮಾಡುವ ಕನಸಿತ್ತು ಎಂದು ಹೇಳಿದ್ದಾರೆ. “ಈ ಕಥೆಗೆ ಪ್ರೇಕ್ಷಕರ ಮನಸ್ಸಿಗೆ ತಲುಪುವಂತಹ ಪ್ರಭಾವಿ ವ್ಯಕ್ತಿತ್ವದ ನಟರ ಅಗತ್ಯವಿತ್ತು. ಆ ಪಾತ್ರಕ್ಕೆ ಶಿವಣ್ಣ ಅವರೇ ಸೂಕ್ತ ಆಯ್ಕೆ ಎನ್ನುವುದು ನಮ್ಮ ನಂಬಿಕೆ. ಎಲ್ಲ ತಲೆಮಾರಿನ ಪ್ರೇಕ್ಷಕರ ಪ್ರೀತಿ ಗಳಿಸಿರುವ ಅವರ ಉಪಸ್ಥಿತಿ ಚಿತ್ರದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ” ಎಂದು ತಿಳಿಸಿದ್ದಾರೆ.
ಇನ್ನೂ ಮಾತನಾಡಿದ ಅವರು, “ಶಿವರಾಜ್ಕುಮಾರ್ ಅವರಿಗೆ ಕಥೆ ಮತ್ತು ಪಾತ್ರ ಇಷ್ಟವಾದರೆ ಅವರು ಸಂಪೂರ್ಣವಾಗಿ ಆ ಪಾತ್ರದಲ್ಲಿ ಲೀನವಾಗುತ್ತಾರೆ. ‘ಮಹಾನ್’ ಚಿತ್ರದಲ್ಲೂ ಅದೇ ನಡೆದಿದೆ. ನಾಯಕನಾಗಿ ಅಪಾರ ಜನಪ್ರಿಯತೆ ಹೊಂದಿರುವ ಅವರು ನಮ್ಮ ಚಿತ್ರದ ಭಾಗವಾಗಿರುವುದು ದೊಡ್ಡ ಶಕ್ತಿಯಾಗಿದೆ” ಎಂದು ಹೇಳಿದ್ದಾರೆ.
ಶಿವರಾಜ್ಕುಮಾರ್ ಅವರ ಸೇರ್ಪಡೆಯಿಂದ ‘ಮಹಾನ್’ ಚಿತ್ರದ ಮೇಲೆ ಸಿನಿಪ್ರೇಮಿಗಳ ಕುತೂಹಲ ಮತ್ತಷ್ಟು ಹೆಚ್ಚಿದ್ದು, ಚಿತ್ರದ ಮುಂದಿನ ಅಪ್ಡೇಟ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


