‘ರಾಕಿ’ ಟ್ರೈಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಜುಲೈ 10ಕ್ಕೆ ಸಿನಿಮಾ ರಿಲೀಸ್

2 Min Read
2 Min Read

ರಾಕಿ’ ಟ್ರೈಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಜುಲೈ 10ಕ್ಕೆ ಸಿನಿಮಾ ತೆರೆಗೆ

ಚೊಚ್ಚಲ ನಾಯಕನಾಗಿ ರಾಕಿ ಸುರೇಶ್ ಅಭಿನಯಿಸಿರುವ ಕ್ರೈಮ್ ಥ್ರಿಲ್ಲರ್ ‘ರಾಕಿ’ ಚಿತ್ರದ ಟ್ರೈಲರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು. ಆರಂಭದಿಂದಲೂ ಈ ಚಿತ್ರಕ್ಕೆ ಬೆಂಬಲ ನೀಡಿರುವ ಅಶ್ವಿನಿ, ಟ್ರೈಲರ್ ಅನಾವರಣದ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಎಸ್‌ಎನ್‌ಆರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಾಳಿಗ್ರಾಮ ಸುರೇಶ್ ನಿರ್ಮಿಸಿರುವ ಈ ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿರುವ ‘ರಾಕಿ’ ಇದೇ ಜುಲೈ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, “ನಿರ್ಮಾಪಕರಿಗೆ ಎರಡು ಕಥೆಗಳನ್ನು ಹೇಳಿದ್ದೆ. ಎರಡನ್ನೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಕೇಳಿಸುವಂತೆ ಅವರು ಸಲಹೆ ನೀಡಿದರು. ಅವರಿಗೂ ಈ ಕಥೆ ಇಷ್ಟವಾಗಿದ್ದರಿಂದ ‘ರಾಕಿ’ ಸಿನಿಮಾ ರೂಪುಗೊಂಡಿತು. ಚಿತ್ರದ ಮುಹೂರ್ತದಲ್ಲಿ ಮೊದಲ ಕ್ಲಾಪ್ ಕೂಡ ಅವರೇ ನೀಡಿದ್ದರು. ಇದೀಗ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ನಮ್ಮ ಬೆನ್ನಿಗೆ ನಿಂತಿದ್ದಾರೆ. ಅವರ ಬೆಂಬಲಕ್ಕೆ ನಾವು ಸದಾ ಋಣಿಯಾಗಿದ್ದೇವೆ” ಎಂದು ಹೇಳಿದರು.

ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಾವುದೇ ಕತ್ತರಿ ಇಲ್ಲದೆ ಯು/ಎ (U/A) ಪ್ರಮಾಣಪತ್ರ ನೀಡಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ರಾಕಿ ಸುರೇಶ್, “ಇದು ಸಾಮಾನ್ಯ ರೌಡಿ ಪಾತ್ರವಲ್ಲ. ಸ್ಟೈಲಿಷ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಲವು ವರ್ಷ ಜರ್ಮನಿಯಲ್ಲಿ ವಾಸವಾಗಿದ್ದ ನಾನು, ಈ ಸಿನಿಮಾಕ್ಕಾಗಿ ವಿಶೇಷವಾಗಿ ತಯಾರಿ ಮಾಡಿಕೊಂಡು ಭಾರತಕ್ಕೆ ಬಂದೆ. ಇದೀಗ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾತರದಿಂದ ಕಾಯುತ್ತಿದ್ದೇನೆ” ಎಂದು ಹೇಳಿದರು.

ನಿರ್ಮಾಪಕ ಸಾಳಿಗ್ರಾಮ ಸುರೇಶ್, “ನಮ್ಮ ಕುಟುಂಬಕ್ಕೆ ಈ ಸಿನಿಮಾ ವಿಶೇಷ. ನನ್ನ ತಂದೆ ರಾಜಶೇಖರ್ ಅವರು ಡಾ. ರಾಜ್‌ಕುಮಾರ್ ಅಭಿನಯದ ‘ಹೊಸಬೆಳಕು’ ಚಿತ್ರವನ್ನು ನಿರ್ಮಿಸಿದ್ದರು. ಇದೀಗ ನನ್ನ ಮಗನನ್ನು ನಾಯಕನಾಗಿ ಪರಿಚಯಿಸುತ್ತಿರುವುದು ಹೆಮ್ಮೆಯ ಸಂಗತಿ. ಚಿತ್ರಕ್ಕೆ ನಿರಂತರ ಪ್ರೋತ್ಸಾಹ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಹಾಗೂ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರಿಗೆ ಧನ್ಯವಾದಗಳು” ಎಂದರು.

ಚಿತ್ರದಲ್ಲಿ ಬಿ. ಸುರೇಶ್ ಭೂಗತ ಲೋಕದ ಡಾನ್ ‘ಡ್ಯಾನಿ’ ಪಾತ್ರದಲ್ಲಿ ನಟಿಸಿದ್ದು, ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಾಲಾ ರಾಜ್ವಾಡಿ, ಜಿಜಿ ಹಾಗೂ ಹರಿಣಿ ಶ್ರೀಕಾಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಲೋಕಿ ತವಸ್ಯ ಸಂಗೀತ ಸಂಯೋಜಿಸಿದ್ದು, ಐಸಾಕ್ ಪ್ರಭಾಕರ್ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಸಂಕಲನ ನಿರ್ವಹಿಸಿದ್ದಾರೆ.

Share This Article