ಆರೋಗ್ಯ ಹೋರಾಟದ ಬಳಿಕ ಹೊಸ ಹುರುಪಿನಲ್ಲಿ ಶಿವಣ್ಣ: ಹುಟ್ಟುಹಬ್ಬದಂದು ಆರೋಗ್ಯ ಸೇವೆ, ಸಿನಿಮಾಗಳ ಅಪ್‌ಡೇಟ್‌ಗಳ ಉಡುಗೊರೆ

2 Min Read
2 Min Read

ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ತಮ್ಮ 64ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಶುಭಾಶಯಗಳ ನಡುವೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಇತ್ತೀಚೆಗೆ ಆರೋಗ್ಯ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸಿ ಮತ್ತೆ ಚಿತ್ರೀಕರಣದಲ್ಲಿ ತೊಡಗಿರುವ ಶಿವಣ್ಣ, “ನಿಮ್ಮ ಶುಭಾಶಯಗಳೇ ನನಗೆ ಸಿಗುವ ಅತ್ಯಂತ ದೊಡ್ಡ ಉಡುಗೊರೆ” ಎಂದು ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.

ಈ ವಿಶೇಷ ದಿನದಂದು ಶಿವರಾಜ್‌ಕುಮಾರ್ ಅವರು ತಮ್ಮ ಮುಂಬರುವ ಸಿನಿಮಾಗಳ ಕುರಿತು ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ, ತಮ್ಮ ಚಿಕಿತ್ಸೆಯ ವೇಳೆ ಆರೈಕೆ ನೀಡಿದ್ದ ಬೆಂಗಳೂರಿನ VSH ಆಸ್ಪತ್ರೆ ಸಹಯೋಗದಲ್ಲಿ ‘ಫ್ಯಾಮಿಲಿ ಹೆಲ್ತ್ ಕಾರ್ಡ್’ ಯೋಜನೆಗೆ ಚಾಲನೆ ನೀಡಿದರು.

ಈ ಯೋಜನೆಯ ಮೂಲಕ ಸುಮಾರು 2,500 ಕುಟುಂಬಗಳಿಗೆ ಉಚಿತ ಆರೋಗ್ಯ ತಪಾಸಣೆ, ತುರ್ತು ಆಂಬುಲೆನ್ಸ್ ಸೇವೆ ಹಾಗೂ ಪ್ರಮುಖ ಚಿಕಿತ್ಸೆಗಳ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ.

‘ಸರ್ವೈವರ್’ ಡಾಕ್ಯುಮೆಂಟರಿ ಟೀಸರ್ ಬಿಡುಗಡೆ

ಹುಟ್ಟುಹಬ್ಬದ ಸಂಭ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ‘ಸರ್ವೈವರ್’ ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆಯಾಯಿತು. ಗೀತಾ ಪಿಕ್ಚರ್ಸ್ ನಿರ್ಮಿಸಿರುವ ಈ ಡಾಕ್ಯುಮೆಂಟರಿ, ಶಿವರಾಜ್‌ಕುಮಾರ್ ಅವರ ಆರೋಗ್ಯ ಹೋರಾಟ, ಆಸ್ಪತ್ರೆಯ ದಿನಗಳು ಹಾಗೂ ಅವರ ಅದ್ಭುತ ಕಮ್‌ಬ್ಯಾಕ್‌ನ್ನು ದಾಖಲಿಸಿದೆ.

ಟೀಸರ್‌ನಲ್ಲಿ ಕಮಲ್ ಹಾಸನ್, ನಾಗಾರ್ಜುನ, ಕಿಚ್ಚ ಸುದೀಪ್, ಸಾಯಿ ಕುಮಾರ್, ದುನಿಯಾ ವಿಜಯ್ ಹಾಗೂ ಧನಂಜಯ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಶಿವಣ್ಣ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

‘A for Anand’ ಚಿತ್ರೀಕರಣಕ್ಕೆ ಸಜ್ಜು

‘ಘೋಸ್ಟ್’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಶ್ರೀನಿ ಅವರೊಂದಿಗೆ ಶಿವರಾಜ್‌ಕುಮಾರ್ ಮತ್ತೆ ಕೈಜೋಡಿಸಿರುವ ‘A for Anand’ ಚಿತ್ರದ ಪ್ರೋಮೋ ಕೂಡ ಬಿಡುಗಡೆಯಾಗಿದೆ.

ಗೀತಾ ಶಿವರಾಜ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶಿವಣ್ಣ ಶಿಕ್ಷಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

‘666: ಆಪರೇಷನ್ ಡ್ರೀಮ್ ಥಿಯೇಟರ್’ ಬಗ್ಗೆ ಹೆಚ್ಚಿದ ನಿರೀಕ್ಷೆ

ನಿರ್ದೇಶಕ ಹೇಮಂತ್ ಎಂ. ರಾವ್ ಅವರ ಬಹುನಿರೀಕ್ಷಿತ ‘666: ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ವಿಶೇಷ ಮೇಕಿಂಗ್ ವಿಡಿಯೊ ಕೂಡ ಬಿಡುಗಡೆಯಾಗಿದ್ದು, ಅದರಲ್ಲಿ ಶಿವರಾಜ್‌ಕುಮಾರ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಕೈತುಂಬಾ ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ

ಶಿವರಾಜ್‌ಕುಮಾರ್ ಅವರ ಕೈಯಲ್ಲಿ ‘ಬೇಲ್’, ‘ಜೈಲರ್ 2’, ತೆಲುಗಿನ ‘ಗುಮ್ಮಡಿ ನರಸಯ್ಯ’, ತಮಿಳಿನ ಹೊಸ ಚಿತ್ರ, ಜೊತೆಗೆ ನಿರ್ದೇಶಕರಾದ ಆರ್. ಚಂದ್ರು ಮತ್ತು ಚೇತನ್ ಕುಮಾರ್ ಅವರ ಚಿತ್ರಗಳು ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿವೆ. ಚೇತನ್ ಕುಮಾರ್ ನಿರ್ದೇಶನದ ‘ಜೆಜೆ ರಾಯ್’ ಚಿತ್ರವನ್ನು ನಿರ್ಮಾಪಕ ಕಿಶೋರ್ ಪಾತಿಕೊಂಡ ನಿರ್ಮಿಸಲಿದ್ದಾರೆ.

ಅಭಿಮಾನಿಗಳಿಗೆ ವಿಶೇಷ ಮನವಿ

ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಂದೇಶ ನೀಡಿದ ಶಿವರಾಜ್‌ಕುಮಾರ್, ಉಡುಗೊರೆಗಳನ್ನು ತರಬೇಡಿ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನಗೆ ಸಾಕು. ಸಾಧ್ಯವಾದರೆ ಸಮಾಜಮುಖಿ ಕಾರ್ಯಗಳಿಗೆ ನೆರವಾಗಿರಿ ಎಂದು ಮನವಿ ಮಾಡಿದರು.

Share This Article