ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳ ನಿರೀಕ್ಷೆ ಹೆಚ್ಚುತ್ತಿರುವ ನಡುವೆಯೇ ‘ಗಣಪತಿ ಬಪ್ಪಾ ಮೋರಿಯಾ’ ಎಂಬ ಹೊಸ ರಾಜಕೀಯ ಥ್ರಿಲ್ಲರ್ ಸಿನಿಮಾ ಗಮನ ಸೆಳೆಯಲು ಸಜ್ಜಾಗಿದೆ. ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಈ ಚಿತ್ರದ ಮೂಲಕ ಸಂಜಯ್ ಕೆ.ಕೆ. ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಆರಂಭಿಸುವ ಮುನ್ನ ಚಿತ್ರತಂಡ ಸುಮಾರು ಎರಡು ವರ್ಷಗಳ ಕಾಲ ಪೂರ್ವ ತಯಾರಿ ನಡೆಸಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಹಲವು ಹಂತಗಳಲ್ಲಿ ಅಭಿವೃದ್ಧಿಪಡಿಸಿದೆ.
ಮೊದಲ ಹಂತದ ಚಿತ್ರೀಕರಣ ಪೂರ್ಣ
ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಎರಡನೇ ಹಂತದ ಶೂಟಿಂಗ್ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಯುವ ಕಲಾವಿದರನ್ನೊಳಗೊಂಡ ಈ ಸಿನಿಮಾದಲ್ಲಿ ‘ಮನದ ಕಡಲು’ ಚಿತ್ರದಲ್ಲಿ ನಟಿಸಿದ್ದ ಸುಮുഖ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ‘ಟಾಮ್ ಅಂಡ್ ಜೆರ್ರಿ’ ಸಿನಿಮಾದಲ್ಲಿ ನಟಿಸಿದ್ದ ನಿಶ್ಚಿತ್ ಕೊರೋಡಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಇನ್ನು ‘ಬಿಂಗೋ’ ಖ್ಯಾತಿಯ ಚಂದನ್ ಆರ್.ಕೆ. ಹಾಗೂ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿರುವ ಸೂರಜ್ ಕೂಡ ತಾರಾಬಳಗದಲ್ಲಿದ್ದಾರೆ.
ತೆಲುಗು ನಟಿ ಬಂಧವಿ ಶ್ರೀಧರ್ ನಾಯಕಿ
ಚಿತ್ರದಲ್ಲಿ ತೆಲುಗು ನಟಿ ಬಂಧವಿ ಶ್ರೀಧರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ ರಾಜ್ಯದ ವಿವಿಧೆಡೆ ನಡೆದ ಆಡಿಷನ್‌ಗಳ ಮೂಲಕ ಆಯ್ಕೆಯಾದ ಹಲವು ಹೊಸ ಪ್ರತಿಭೆಗಳು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯುವ ಕಲಾವಿದರು ಮತ್ತು ಹೊಸ ಪ್ರತಿಭೆಗಳ ಸಂಯೋಜನೆಯೊಂದಿಗೆ ಸಿನಿಮಾ ರೂಪುಗೊಳ್ಳುತ್ತಿದ್ದು, ರಾಜಕೀಯ ಹಿನ್ನೆಲೆಯ ಥ್ರಿಲ್ಲರ್ ಕಥಾಹಂದರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
‘ಘೋಸ್ಟ್’ ಖ್ಯಾತಿಯ ಪ್ರಸನ್ನ ಸಂಭಾಷಣೆ
ಚಿತ್ರದ ತಾಂತ್ರಿಕ ತಂಡವೂ ಗಮನ ಸೆಳೆಯುತ್ತಿದೆ. ಶಿವರಾಜ್‌ಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರದಲ್ಲಿ ಕೆಲಸ ಮಾಡಿದ್ದ ಬರಹಗಾರ ಪ್ರಸನ್ನ ಅವರು ‘ಗಣಪತಿ ಬಪ್ಪಾ ಮೋರಿಯಾ’ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ.
ಮಿಧುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ‘ಮರ್ಫಿ’ ಚಿತ್ರದ ಛಾಯಾಗ್ರಹಣದ ಮೂಲಕ ಗುರುತಿಸಿಕೊಂಡಿರುವ ಆನಂದ್ ಮೀನಾಕ್ಷಿ ಕ್ಯಾಮೆರಾ ನಿರ್ವಹಿಸುತ್ತಿದ್ದಾರೆ.
ಚಿತ್ರದ ನಿರ್ಮಾಣ ವಿನ್ಯಾಸವನ್ನು ‘ಕಾಟೇರ’ ಚಿತ್ರದಲ್ಲಿ ಕೆಲಸ ಮಾಡಿದ್ದ ಗುಣಾ ನಿರ್ವಹಿಸುತ್ತಿದ್ದು, ಮಹೇಶ್ ತೊಗಟಾ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ರಾಯಲ್ ಫ್ಲೈ ಎಂಟರ್‌ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ನಿರ್ಮಾಣ
ರಾಯಲ್ ಫ್ಲೈ ಎಂಟರ್‌ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಲಾರೆನ್ಸ್ ಜೋಸೆಫ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎರಡನೇ ಶೆಡ್ಯೂಲ್‌ಗಾಗಿ ಚಿತ್ರತಂಡ ಸಜ್ಜಾಗುತ್ತಿದೆ.
ರಾಜಕೀಯ ಹಿನ್ನೆಲೆಯ ಕಥೆ, ಯುವ ತಾರಾಬಳಗ ಮತ್ತು ಅನುಭವಿ ತಾಂತ್ರಿಕ ತಂಡದ ಸಂಯೋಜನೆಯಿಂದ ‘ಗಣಪತಿ ಬಪ್ಪಾ ಮೋರಿಯಾ’ ಸಿನಿಮಾ ಕನ್ನಡ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.


