ಬೆಂಗಳೂರು/ಜೈಪುರ: ಕನ್ನಡದ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ದಕ್ಷಿಣ ಭಾರತೀಯ ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರಂದು ಜೈಪುರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಕುಟುಂಬದವರು, ಆತ್ಮೀಯ ಸ್ನೇಹಿತರು ಹಾಗೂ ಚಿತ್ರರಂಗದ ಕೆಲ ಗಣ್ಯರ ಸಮ್ಮುಖದಲ್ಲಿ ಇಬ್ಬರೂ ಹಸೆಮಣೆ ಏರಿದರು.
ಮದುವೆಗೆ ಮುನ್ನ ಸಂಪ್ರದಾಯಬದ್ಧ ಪೂರ್ವ ವಿಧಿವಿಧಾನಗಳು ನಡೆದಿದ್ದು, ಬಳಿಕ ದಕ್ಷಿಣ ಭಾರತೀಯ ಸಂಪ್ರದಾಯದಂತೆ ವಿವಾಹ ನೆರವೇರಿತು. ರಾಜಸ್ಥಾನದ ಜೈಪುರದ ರಾಜಮನೆತನದ ಸೊಬಗಿನ ವಾತಾವರಣದಲ್ಲಿ ನಡೆದ ಈ ಸಮಾರಂಭ ಸರಳತೆ ಮತ್ತು ಆತ್ಮೀಯತೆಯಿಂದ ಕೂಡಿತ್ತು.
ಈ ಮದುವೆಯಲ್ಲಿ ನಟಿ ರಮ್ಯಾ (ದಿವ್ಯ ಸ್ಪಂದನ) ಕೂಡ ಭಾಗವಹಿಸಿದ್ದರು. ಶರ್ಮಿಳಾ ಅವರ ಆಪ್ತ ಸ್ನೇಹಿತರಾಗಿರುವ ರಮ್ಯಾ, ವಿವಾಹದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
“ನನ್ನ ಮುದ್ದಿನ ಚಂಪಿ ಮದುವೆಯಾಗಿದ್ದಾಳೆ! ಈ ಮಾತನ್ನು ಹೇಳುತ್ತಿದ್ದೇನೆ ಎನ್ನುವುದೇ ನಂಬಲಾಗುತ್ತಿಲ್ಲ. ಸಮಯ ಎಷ್ಟು ಬೇಗ ಕಳೆಯುತ್ತದೆ!” ಎಂದು ಶುಭಾಶಯ ತಿಳಿಸಿದ ಅವರು, ಪ್ರೀತಿ, ನಂಬಿಕೆ ಮತ್ತು ಜೊತೆಯಾಟದಿಂದ ಕೂಡಿದ ಸುಂದರ ದಾಂಪತ್ಯ ಜೀವನವನ್ನು ಶರ್ಮಿಳಾ ಹೊಂದಲಿ ಎಂದು ಹಾರೈಸಿದರು.
ಲೆಬನೀಸ್-ಅಮೆರಿಕನ್ ಕವಿ ಖಲೀಲ್ ಜಿಬ್ರಾನ್ ಅವರ ಮಾತುಗಳನ್ನು ಉಲ್ಲೇಖಿಸಿದ ರಮ್ಯಾ, “ನೀನು ಯಾವಾಗಲೂ ಸುರಕ್ಷಿತವಾಗಿ ಭಾವಿಸುವ, ನಿಮ್ಮಿಬ್ಬರದೇ ಆದ ಪ್ರೀತಿಯ ಲೋಕವನ್ನು ಕಟ್ಟಿಕೊಳ್ಳುವ ಹಾಗೂ ಸಂಪೂರ್ಣವಾಗಿ ನೀನೇ ಆಗಿರಬಹುದಾದ ದಾಂಪತ್ಯ ಜೀವನ ನಿನ್ನದಾಗಲಿ” ಎಂದು ಹಾರೈಸಿದರು.
ಕೊನೆಯಲ್ಲಿ, “ನಾನು ಯಾವಾಗಲೂ ನಿನ್ನ ಸ್ನೇಹಿತೆಯಾಗಿಯೇ ಇರುತ್ತೇನೆ” ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.
ಮದುವೆಯ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ನವದಂಪತಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.
‘ಸಜನಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಶರ್ಮಿಳಾ ಮಾಂಡ್ರೆ, ಬಳಿಕ ‘ನವಗ್ರಹ’, ‘ಮುಸ್ಸಂಜೆ ಮಾತು’, ‘ಕೃಷ್ಣ’, ‘ಆಕೆ’, ‘ಗಾಳಿಪಟ 2’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಇನ್ನು ಸುಧನ್ ಸುಂದರಂ ದಕ್ಷಿಣ ಭಾರತೀಯ ಚಿತ್ರರಂಗದ ಹೆಸರಾಂತ ನಿರ್ಮಾಪಕರಾಗಿದ್ದು, ವಿವಿಧ ಭಾಷೆಗಳ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.


