ಮಕ್ಕಳಿಗೂ ಜೀವ ಬೆದರಿಕೆ; ಆನ್‌ಲೈನ್ ದ್ವೇಷದಿಂದ X ತೊರೆದ ರಾಹುಲ್ ರವೀಂದ್ರನ್: ಚಿನ್ಮಯಿ ಶ್ರೀಪಾದ ಹೇಳಿಕೆ
ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ಆನ್‌ಲೈನ್ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಕ್ಕಳ ಸಾವನ್ನೇ ಬಯಸುವ ಮಟ್ಟಿಗೆ ದ್ವೇಷಪೂರಿತ ಸಂದೇಶಗಳು ಬಂದಿದ್ದರಿಂದ ಪತಿ ರಾಹುಲ್ ರವೀಂದ್ರನ್ ಅವರು X (ಹಿಂದಿನ ಟ್ವಿಟರ್) ವೇದಿಕೆಯನ್ನು ತೊರೆಯಬೇಕಾಯಿತು ಎಂದು ತಿಳಿಸಿದ್ದಾರೆ.
Xನಲ್ಲಿ ಹಂಚಿಕೊಂಡ ಸುಮಾರು ಏಳು ನಿಮಿಷಗಳ ವಿಡಿಯೊದಲ್ಲಿ ಚಿನ್ಮಯಿ, ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರ ಪರ ಹೋರಾಟ, ಅತ್ಯಾಚಾರ ಸಂಸ್ಕೃತಿ (Rape Culture), ಮಹಿಳಾ ವಿರೋಧಿ ಮನೋಭಾವ ಮತ್ತು ಸತತ ಆನ್‌ಲೈನ್ ಕಿರುಕುಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
“ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರಿಗೆ ನ್ಯಾಯ ದೊರಕಬೇಕು ಎಂಬುದು ನನ್ನ ಜೀವನದ ಅತ್ಯಂತ ಮಹತ್ವದ ಹೋರಾಟಗಳಲ್ಲಿ ಒಂದಾಗಿದೆ. ಅತ್ಯಾಚಾರ ಸಂಸ್ಕೃತಿಯ ಬಗ್ಗೆ ಮಾತನಾಡದೇ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.
ಚಿನ್ಮಯಿ ಅವರ ಪ್ರಕಾರ, ಮಹಿಳೆಯರ ಮೇಲಿನ ಹಿಂಸಾಚಾರವು ನೇರವಾಗಿ ಅತ್ಯಾಚಾರದಿಂದ ಆರಂಭವಾಗುವುದಿಲ್ಲ. ಲಿಂಗಭೇದದ ಹಾಸ್ಯ, ಅಶ್ಲೀಲ ಕಾಮೆಂಟ್‌ಗಳು, ಅವಹೇಳನ, ರಿವೆಂಜ್ ಪೋರ್ನ್, ಅನಗತ್ಯ ಅಶ್ಲೀಲ ಚಿತ್ರಗಳ ಕಳುಹಿಸುವಿಕೆ ಮೊದಲಾದ ವರ್ತನೆಗಳೇ ನಂತರ ಗಂಭೀರ ಅಪರಾಧಗಳಿಗೆ ಕಾರಣವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳೊಂದಿಗೂ ಸಮ್ಮತಿ (Consent) ಎಂಬ ಮೌಲ್ಯವನ್ನು ಪಾಲಿಸಬೇಕು ಎಂದು ತಾವು ಹಿಂದೆ ಹೇಳಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ನೆನಪಿಸಿಕೊಂಡ ಚಿನ್ಮಯಿ, ಆ ಬಳಿಕ ತಾವು ಮತ್ತು ಪತಿ ರಾಹುಲ್ ನಿರಂತರ ಟ್ರೋಲಿಂಗ್‌ಗೆ ಗುರಿಯಾಗಿದ್ದೇವೆ ಎಂದಿದ್ದಾರೆ.
ತಮ್ಮ ವಿರುದ್ಧ ಹಲವು ಭಾಷೆಗಳಲ್ಲಿ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂದು ಹೇಳಿದ ಅವರು, “ರಾಹುಲ್ ಇನ್ನೂ ನನ್ನ ಜೊತೆಗೆ ಯಾಕಿದ್ದಾರೆ? ವಿಚ್ಛೇದನ ಯಾಕೆ ಕೊಡಲಿಲ್ಲ?” ಎಂಬ ರೀತಿಯ ಕಾಮೆಂಟ್‌ಗಳು ಸಮಾಜದಲ್ಲಿರುವ ಪಿತೃಸತ್ತಾತ್ಮಕ ಮನೋಭಾವವನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ.
ಇದೇ ವೇಳೆ, ಪತ್ನಿಯನ್ನು ಬೆಂಬಲಿಸಿದ್ದಕ್ಕಾಗಿ ರಾಹುಲ್ ರವೀಂದ್ರನ್ ಅವರ ಪುರುಷತ್ವವನ್ನೇ ಪ್ರಶ್ನಿಸುವ ರೀತಿಯ ಅವಹೇಳನಕಾರಿ ಪದಗಳನ್ನು ಬಳಸಿ ಟ್ರೋಲ್ ಮಾಡಲಾಗಿದೆ ಎಂದು ಚಿನ್ಮಯಿ ಆರೋಪಿಸಿದ್ದಾರೆ.
“ಮಹಿಳೆಯರ ವಿರುದ್ಧ ನಡೆಯುವ ವ್ಯವಸ್ಥಿತ ದೌರ್ಜನ್ಯವನ್ನು ಪುರುಷರ ವಿರುದ್ಧ ನಡೆಯುವ ಕೆಲವು ಪ್ರತ್ಯೇಕ ಘಟನೆಗಳೊಂದಿಗೆ ಹೋಲಿಕೆ ಮಾಡಬಾರದು” ಎಂದು ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ಅವರು ಹೇಳಿದ್ದಾರೆ.
ಅದರ ನಂತರ ಸಂಘಟಿತ ರೀತಿಯಲ್ಲಿ ತಮ್ಮ ಕುಟುಂಬದ ವಿರುದ್ಧ ದ್ವೇಷಪೂರಿತ ಅಭಿಯಾನ ಆರಂಭವಾಗಿದ್ದು, ತಮ್ಮ ಚಿಕ್ಕ ಮಕ್ಕಳ ಸಾವನ್ನೇ ಬಯಸುವ ಸಂದೇಶಗಳು ಬಂದವು. ಇದೇ ಕಾರಣದಿಂದ ರಾಹುಲ್ ರವೀಂದ್ರನ್ ಕೊನೆಗೆ X ವೇದಿಕೆಯಿಂದ ಹೊರಬಂದರು ಎಂದು ಚಿನ್ಮಯಿ ತಿಳಿಸಿದ್ದಾರೆ.


