ಬೆಂಗಳೂರು, ಆಗಸ್ಟ್ 27: ಬೆಂಗಳೂರಿನಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಕಳೆ-ಗಿಡಗಂಟಿಗಳು ಬೆಳೆಯಲು ಬಿಡುವ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮಕ್ಕೆ ಮುಂದಾಗಿದೆ. ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸದಿದ್ದರೆ, ಜಿಬಿಎಯೇ ಸ್ವಚ್ಛತಾ ಕಾರ್ಯ ನಡೆಸಿ ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆಯ ಮೂಲಕ ಮಾಲೀಕರಿಂದಲೇ ವಸೂಲಿ ಮಾಡಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ದೊಮ್ಮಲೂರಿನಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಿ ಮಾತನಾಡಿದ ಸಚಿವರು, ಮಾಲೀಕರು ತಮ್ಮ ಜಾಗವನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದು ಮನವಿ ಮಾಡಿದರು.
ಪಾಲಿಕೆಯಿಂದ ಸ್ವಚ್ಛತಾ ಕಾರ್ಯ ನಡೆಸುವುದಕ್ಕಿಂತ ಮಾಲೀಕರೇ ತಮ್ಮ ನಿವೇಶನವನ್ನು ಸ್ವಚ್ಛಗೊಳಿಸಿಕೊಂಡರೆ ವೆಚ್ಚ ಕಡಿಮೆಯಾಗಲಿದೆ. ಬೆಂಗಳೂರಿನ ಸ್ವಚ್ಛತೆ ಕಾಪಾಡುವಲ್ಲಿ ಆಸ್ತಿ ಮಾಲೀಕರು ಕೂಡ ಜವಾಬ್ದಾರಿಯಿಂದ ಸಹಕರಿಸಬೇಕು ಎಂದು ಅವರು ಹೇಳಿದರು.
ಶೇ.70ರಷ್ಟು ನಿವೇಶನಗಳು ಇನ್ನೂ ಸ್ವಚ್ಛವಾಗಿಲ್ಲ
‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ಮೊದಲು ಆಗಸ್ಟ್ 15ರವರೆಗೆ ಗಡುವು ನೀಡಲಾಗಿತ್ತು. ಬಳಿಕ ಮತ್ತೊಂದು ವಾರ ಕಾಲಾವಕಾಶ ವಿಸ್ತರಿಸಿ ಆಗಸ್ಟ್ 22ರವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಆದರೆ ನಿಗದಿತ ಅವಧಿಯಲ್ಲಿ ಸುಮಾರು ಶೇ.30ರಷ್ಟು ಮಾಲೀಕರು ಮಾತ್ರ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡಿದ್ದಾರೆ. ಉಳಿದ ಶೇ.70ರಷ್ಟು ನಿವೇಶನಗಳ ವಿರುದ್ಧ ಇದೀಗ ಜಿಬಿಎ ಸ್ವಚ್ಛತಾ ಕಾರ್ಯಾಚರಣೆ ಆರಂಭಿಸಿದೆ.
ಖಾಲಿ ಜಾಗಗಳಲ್ಲಿ ಕಳೆ-ಗಿಡಗಂಟಿಗಳು ಬೆಳೆದು ಸೊಳ್ಳೆ, ನೊಣ, ಹಾವು, ಇಲಿ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೂ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಸ್ವಚ್ಛತೆ ಕೈಗೊಂಡವರಿಗೆ ಧನ್ಯವಾದ ಪತ್ರ
ತಮ್ಮ ನಿವೇಶನಗಳನ್ನು ಈಗಾಗಲೇ ಸ್ವಚ್ಛಗೊಳಿಸಿಕೊಂಡಿರುವ ಮಾಲೀಕರಿಗೆ ಕೃಷ್ಣ ಬೈರೇಗೌಡ ಧನ್ಯವಾದ ಸಲ್ಲಿಸಿದರು.
ನಿವೇಶನ ಸ್ವಚ್ಛಗೊಳಿಸಿಕೊಳ್ಳುವಂತೆ ಕಳೆದ ಒಂದೂವರೆ ತಿಂಗಳಿಂದ ಮನವಿ ಮಾಡಲಾಗುತ್ತಿದೆ. ಮನವಿಗೆ ಸ್ಪಂದಿಸಿ ತಮ್ಮ ಜಾಗವನ್ನು ಸ್ವಚ್ಛಗೊಳಿಸಿಕೊಂಡಿರುವ ಮಾಲೀಕರಿಗೆ ವೈಯಕ್ತಿಕವಾಗಿ ಧನ್ಯವಾದ ಪತ್ರ ಕಳುಹಿಸಲಾಗುವುದು ಎಂದು ಸಚಿವರು ಹೇಳಿದರು.
ಮೊದಲ ಬಾರಿ ದಂಡ ಇಲ್ಲ
ಮೊದಲ ಬಾರಿಗೆ ಖಾಲಿ ನಿವೇಶನ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮಾಲೀಕರಿಗೆ ದಂಡ ವಿಧಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಆದರೆ ಮುಂದೆಯೂ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿವೇಶನದ ವಿಸ್ತೀರ್ಣ ಹಾಗೂ ಕೈಗೊಳ್ಳುವ ಸ್ವಚ್ಛತಾ ಕಾರ್ಯದ ಆಧಾರದ ಮೇಲೆ ಎಸ್ಆರ್ ದರದಲ್ಲಿ ವೆಚ್ಚ ನಿಗದಿಪಡಿಸಲಾಗುತ್ತದೆ. ಗಿಡಗಂಟಿಗಳು ಹೆಚ್ಚಾಗಿ ಬೆಳೆದಿರುವ ಪ್ರದೇಶಗಳಲ್ಲಿ ಜೆಸಿಬಿ ಬಳಸಿ ಸ್ವಚ್ಛಗೊಳಿಸಲು ಕನಿಷ್ಠ ಮೂರು ಗಂಟೆಗಳ ಸಮಯ ಬೇಕಾಗಬಹುದು. ತೆರವುಗೊಳಿಸಿದ ತ್ಯಾಜ್ಯವನ್ನು ಸಾಗಿಸಲು ಹಾಗೂ ವಿಲೇವಾರಿ ಮಾಡಲು ಕೂಡ ನಿರ್ದಿಷ್ಟ ಸಮಯ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಡೆ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಬೇಕಾದ ಸಂದರ್ಭದಲ್ಲಿಯೂ ನಿಗದಿತ ದರವೇ ಅನ್ವಯವಾಗಲಿದೆ. ಗೇಟ್ ಹೊಂದಿರುವ ನಿವೇಶನಗಳಿಗೆ ಹೆಚ್ಚುವರಿ ದರ ವಿಧಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
1.22 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ತ್ಯಾಜ್ಯ ತೆರವು
ನಗರದಾದ್ಯಂತ ಜುಲೈ 15ರಿಂದ ಆರಂಭಿಸಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದಡಿ ಇದುವರೆಗೆ 1,22,732 ಮೆಟ್ರಿಕ್ ಟನ್ ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ (C&D Waste) ತೆರವುಗೊಳಿಸಲಾಗಿದೆ.
ಇದರಲ್ಲಿ ಜಿಬಿಎ ವತಿಯಿಂದ 67,152 ಮೆಟ್ರಿಕ್ ಟನ್, ಬಿಡಿಎ 51,323 ಮೆಟ್ರಿಕ್ ಟನ್, ಜಲಮಂಡಳಿ 728 ಮೆಟ್ರಿಕ್ ಟನ್, ಕೆಐಎಡಿಬಿ 2,800 ಮೆಟ್ರಿಕ್ ಟನ್, ಕೆ-ರೈಡ್ 560 ಮೆಟ್ರಿಕ್ ಟನ್ ಹಾಗೂ ಎನ್ಎಚ್ಎಐ 169 ಮೆಟ್ರಿಕ್ ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ.
ಇದರ ಜತೆಗೆ ಬೆಸ್ಕಾಂ 6,173 ಕಂಬಗಳು/ರಾಡ್ಗಳನ್ನು ತೆರವುಗೊಳಿಸುವ ಅಥವಾ ಎತ್ತರಿಸುವ ಕಾರ್ಯ ಕೈಗೊಂಡಿದೆ. ಮೆಟ್ರೋ ವತಿಯಿಂದ 2,143 ಕ್ಯುಬಿಕ್ ಮೀಟರ್ ತ್ಯಾಜ್ಯ ತೆರವುಗೊಳಿಸಲಾಗಿದೆ.
189 ಖಾಲಿ ನಿವೇಶನಗಳಿಗೆ ನೋಟಿಸ್
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರಿಗೆ ಈಗಾಗಲೇ 189 ನಿವೇಶನಗಳಿಗೆ ನೋಟಿಸ್ ಅಂಟಿಸಲಾಗಿದೆ. ಐದು ನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ.
- ಕೇಂದ್ರ ನಗರ ಪಾಲಿಕೆ: 53 ನಿವೇಶನಗಳು
- ಉತ್ತರ ನಗರ ಪಾಲಿಕೆ: 37 ನಿವೇಶನಗಳು
- ಪಶ್ಚಿಮ ನಗರ ಪಾಲಿಕೆ: 41 ನಿವೇಶನಗಳು
- ಪೂರ್ವ ನಗರ ಪಾಲಿಕೆ: 28 ನಿವೇಶನಗಳು
- ದಕ್ಷಿಣ ನಗರ ಪಾಲಿಕೆ: 30 ನಿವೇಶನಗಳು
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೇವಲ ಸ್ಥಳೀಯ ಆಡಳಿತದ ಜವಾಬ್ದಾರಿಯಲ್ಲ; ಆಸ್ತಿ ಮಾಲೀಕರ ಕರ್ತವ್ಯವೂ ಆಗಿದೆ ಎಂಬ ಸಂದೇಶವನ್ನು ಜಿಬಿಎ ನೀಡಿದೆ. ಮಾಲೀಕರು ತಮ್ಮ ಜಾಗವನ್ನು ತಾವೇ ಸ್ವಚ್ಛಗೊಳಿಸುವ ಮೂಲಕ ಹೆಚ್ಚುವರಿ ವೆಚ್ಚ ತಪ್ಪಿಸುವುದರ ಜತೆಗೆ ನಗರದ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು ಎಂದು ಕೃಷ್ಣ ಬೈರೇಗೌಡ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ., ಅಪರ ಆಯುಕ್ತ ವೆಂಕಟಾಚಲಪತಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


