ನವದೆಹಲಿ: 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ನಡೆಯಲಿರುವ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕೇಂದ್ರ ಜವಳಿ ಸಚಿವಾಲಯ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಹಾಗೂ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂಭ್ರಮಿಸುವುದು ಹಾಗೂ ದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೇಕಾರ ಸಮುದಾಯ ನೀಡಿರುವ ಕೊಡುಗೆಯನ್ನು ಗುರುತಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಜವಳಿ ಸಚಿವಾಲಯ ತಿಳಿಸಿದೆ.
22 ನೇಕಾರರಿಗೆ ಪ್ರತಿಷ್ಠಿತ ಪ್ರಶಸ್ತಿ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 2025ನೇ ಸಾಲಿನ ಸಂತ ಕಬೀರ್ ಕೈಮಗ್ಗ ಪ್ರಶಸ್ತಿ ಮತ್ತು ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಒಟ್ಟು 22 ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ ಮೂರು ಸಂತ ಕಬೀರ್ ಕೈಮಗ್ಗ ಪ್ರಶಸ್ತಿಗಳು ಹಾಗೂ 19 ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳು ಸೇರಿವೆ. ಅತ್ಯುತ್ತಮ ಕೌಶಲ್ಯ, ಹೊಸತನ ಹಾಗೂ ಭಾರತದ ಸಾಂಪ್ರದಾಯಿಕ ಕೈಮಗ್ಗ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನೀಡಿದ ಕೊಡುಗೆಗಾಗಿ ನೇಕಾರರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಭಾರತದ ವೈವಿಧ್ಯಮಯ ಕೈಮಗ್ಗ ನೇಯ್ಗೆ ಪರಂಪರೆಯನ್ನು ಬಿಂಬಿಸುವ ನಾಲ್ಕು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಇದರ ಜತೆಗೆ Earth. Root. Thread – Aal Dyed Handloom Textiles of Central India ಹಾಗೂ Handloom Awards Book 2025 ಎಂಬ ಎರಡು ಪ್ರಕಟಣೆಗಳನ್ನು ಕೂಡ ಅನಾವರಣಗೊಳಿಸಲಾಗುತ್ತದೆ.
ಸಾಂಪ್ರದಾಯಿಕ ನೇಯ್ಗೆಯ ನೇರ ಪ್ರದರ್ಶನ
ಕಾರ್ಯಕ್ರಮದ ಅಂಗವಾಗಿ ಪ್ರಶಸ್ತಿ ವಿಜೇತ ನೇಕಾರರ ಕೈಮಗ್ಗ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಅಲ್ಲದೆ, ಸಾಂಪ್ರದಾಯಿಕ ಕನಿ ನೇಯ್ಗೆ ಮತ್ತು ವಾಲ್ ಹ್ಯಾಂಗಿಂಗ್ ನೇಯ್ಗೆಯ ನೇರ ಪ್ರಾತ್ಯಕ್ಷಿಕೆ ಕೂಡ ನಡೆಯಲಿದ್ದು, ಭಾರತದ ಕೈಮಗ್ಗ ಪರಂಪರೆಯ ವೈವಿಧ್ಯತೆ ಮತ್ತು ನೇಕಾರರ ಅದ್ಭುತ ಕೌಶಲ್ಯವನ್ನು ಪರಿಚಯಿಸಲಿದೆ.
ಪ್ರತಿ ವರ್ಷ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 1905ರ ಇದೇ ದಿನ ಆರಂಭವಾದ ಸ್ವದೇಶಿ ಚಳವಳಿಯ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
2015ರಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಆರಂಭವಾದ ಬಳಿಕ, ದೇಶದ ನೇಕಾರರ ಕಲೆ, ಕೌಶಲ್ಯ ಮತ್ತು ಸಮರ್ಪಣೆಯನ್ನು ಗೌರವಿಸುವ ಪ್ರಮುಖ ದಿನವಾಗಿ ಇದು ಗುರುತಿಸಿಕೊಂಡಿದೆ ಎಂದು ಜವಳಿ ಸಚಿವಾಲಯ ತಿಳಿಸಿದೆ.


