ಫ್ರಾನ್ಸ್ನ ಎವಿಯಾನ್ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆ ಜಾಗತಿಕ ರಾಜತಾಂತ್ರಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಹತ್ವದ ದ್ವಿಪಕ್ಷೀಯ ಸಭೆ ನಡೆಯಲಿದೆ. ಶೃಂಗಸಭೆಯ ಪಾರ್ಶ್ವದಲ್ಲಿ ನಡೆಯಲಿರುವ ಈ ಭೇಟಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಗಮನ ಸೆಳೆದಿದೆ.
2025ರ ಫೆಬ್ರವರಿಯಲ್ಲಿ ವಾಷಿಂಗ್ಟನ್ನಲ್ಲಿ ನಡೆದ ಭೇಟಿಯ ಬಳಿಕ ಉಭಯ ನಾಯಕರು ಮುಖಾಮುಖಿಯಾಗಿ ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ವೇಳೆ ವ್ಯಾಪಾರ, ತಂತ್ರಜ್ಞಾನ, ರಕ್ಷಣಾ ಸಹಕಾರ, ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸುವ ನಿರೀಕ್ಷೆಯಿದೆ. ಜೊತೆಗೆ ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತೂ ಅಭಿಪ್ರಾಯ ವಿನಿಮಯ ನಡೆಯಲಿದೆ.
ವಿಶ್ವ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಭಾರತದ ಪ್ರಭಾವ ನಿರಂತರವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ವಿಶೇಷ ಮಹತ್ವ ಪಡೆದುಕೊಂಡಿದೆ. ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತ ಪ್ರಮುಖ ಪಾತ್ರವಹಿಸುತ್ತಿದ್ದು, ಅನೇಕ ರಾಷ್ಟ್ರಗಳು ನವದೆಹಲಿಯತ್ತ ನಿರೀಕ್ಷೆಯಿಂದ ನೋಡುತ್ತಿರುವುದು ಗಮನಾರ್ಹವಾಗಿದೆ.
ನಿನ್ನೆ ನಡೆದ ಜಿ7 ಔಟ್ರೀಚ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಂತರರಾಷ್ಟ್ರೀಯ ಸಹಭಾಗಿತ್ವಗಳ ಯಶಸ್ಸಿಗೆ ‘ನಂಬಿಕೆ’ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಭಾರತವು ಸದಾ ‘ಮಾನವೀಯತೆ ಮೊದಲು’ ಎಂಬ ತತ್ವವನ್ನು ಅನುಸರಿಸಿದ್ದು, ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA), ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟ (CDRI), ಗ್ಲೋಬಲ್ ಬಯೋಫ್ಯುಯೆಲ್ ಅಲಯನ್ಸ್, ಮಿಷನ್ ಲೈಫ್ ಹಾಗೂ ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನಗಳು ಅದಕ್ಕೆ ಸಾಕ್ಷಿ ಎಂದು ಹೇಳಿದರು.
ಇಂದು ಪ್ರಧಾನಿ ಮೋದಿ ಜಿ7 ಕಾರ್ಯಾಧಿವೇಶನದಲ್ಲಿ “ಸಮತೋಲಿತ, ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ” ವಿಷಯದ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಕೃತಕ ಬುದ್ಧಿಮತ್ತೆಯ (AI) ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದ ವಿಶೇಷ ಕಾರ್ಯಭೋಜನ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೊ ಕೋಸ್ಟಾ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೆಯೆನ್ ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸಲಿರುವ ಪ್ರಧಾನಿ ಮೋದಿ, ಜರ್ಮನಿಯ ಚಾನ್ಸಲರ್ ಫ್ರಿಡ್ರಿಕ್ ಮರ್ಝ್ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ನಿನ್ನೆ ಶೃಂಗಸಭೆಯ ಪಾರ್ಶ್ವದಲ್ಲಿ ಮೋದಿ ಅವರು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್, ಕೀನ್ಯಾ ಅಧ್ಯಕ್ಷ ವಿಲಿಯಂ ರೂಟೋ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ, ಜಪಾನ್ ಪ್ರಧಾನಿ ಸನಾಏ ತಕೈಚಿ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ-ಮ್ಯೂಂಗ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದರು.


