ಭುವನೇಶ್ವರ: ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಮಹಾನದಿ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಒಡಿಶಾದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಪ್ರವಾಹದಿಂದ 15 ಜಿಲ್ಲೆಗಳು ತೀವ್ರವಾಗಿ ಬಾಧಿತವಾಗಿದ್ದು, ಅನೇಕ ಗ್ರಾಮಗಳು, ರಸ್ತೆಗಳು ಹಾಗೂ ಕೃಷಿ ಭೂಮಿಗಳು ಇನ್ನೂ ನೀರಿನಿಂದ ಆವೃತವಾಗಿವೆ.
ಹಿರಾಕುಡ್ ಅಣೆಕಟ್ಟಿನಲ್ಲಿ ಪ್ರವಾಹ ನೀರನ್ನು ಹೊರಹಾಕಲು 22 ಗೇಟ್ಗಳನ್ನು ತೆರೆಯಲಾಗಿದೆ. ಜಲಾಶಯದ ನೀರಿನ ಮಟ್ಟ 625.15 ಅಡಿಗೆ ತಲುಪಿದ್ದು, ಮೇಲ್ಭಾಗದಿಂದ ನೀರಿನ ಹರಿವು ಮುಂದುವರಿದಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಗೇಟ್ಗಳನ್ನು ತೆರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಮಹಾನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ತೀವ್ರತೆ ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತವಾಗಿದೆ.
ಕಟಕ್ ಜಿಲ್ಲೆಯ ಮುಂಡಾಲಿ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಚಿತ್ತ್ರೋತ್ಪಲಾ, ಲೂನಾ, ಕರಂಡಿಯಾ, ಪೈಕಾ ಹಾಗೂ ದೇವಿ ನದಿಗಳಲ್ಲೂ ಪ್ರವಾಹದ ಪ್ರಮಾಣ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕಟಕ್, ಜಗತ್ಸಿಂಗ್ಪುರ, ಕೇಂದ್ರಾಪಾರ ಹಾಗೂ ಪುರಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಪ್ರವಾಹದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಇದೇ ವೇಳೆ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ನಾಳೆ ಬಾಲಾಸೋರ್, ಭದ್ರಕ್, ಜಾಜ್ಪುರ್ ಹಾಗೂ ಕಿಯೋಂಜರ್ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿ ಹಾನಿಯ ಪ್ರಮಾಣವನ್ನು ಪರಿಶೀಲಿಸಲಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಭದ್ರಕ್ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.


