ಒಡಿಶಾದಲ್ಲಿ ಪ್ರವಾಹ ಭೀತಿ ಹೆಚ್ಚಳ: ಮಹಾನದಿ ನೀರಿನ ಮಟ್ಟ ಏರಿಕೆ, 20 ಜಿಲ್ಲೆಗಳ ಮೇಲೆ ಪರಿಣಾಮ

1 Min Read
1 Min Read

ಭುವನೇಶ್ವರ: ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಹಾನದಿ ನದಿಯ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದ್ದು, ಒಡಿಶಾದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಕ್ಷಣಾ, ಪರಿಹಾರ ಹಾಗೂ ನಿಗಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಜಾಜ್ಪುರ್, ಭದ್ರಕ್, ಬಾಲಾಸೋರ್ ಹಾಗೂ ಕೆಂದುಝರ್ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಪ್ರಗತಿಯನ್ನು ಅವರು ಅವಲೋಕಿಸಿದರು.

ಸಚಿವರ ಮಾಹಿತಿ ಪ್ರಕಾರ, 20 ಜಿಲ್ಲೆಗಳ 100 ಬ್ಲಾಕ್‌ಗಳು ಹಾಗೂ 14 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.

ಇದೇ ವೇಳೆ, ಭದ್ರಕ್ ಜಿಲ್ಲೆಯ ಬಸುದೇವಪುರ ಪ್ರದೇಶದಲ್ಲಿ ಎರಡನೇ ಹಂತದ ಪ್ರವಾಹ ಉಂಟಾಗಿ, ನೂರಾರು ಕುಟುಂಬಗಳು ಸಿಲುಕಿಕೊಂಡಿದ್ದು, ಕೃಷಿ ಭೂಮಿಗೂ ವ್ಯಾಪಕ ಹಾನಿಯಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಬರ್ಗಢ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಝಾರ್ಸುಗುಡಾ, ಸಂಬಲ್ಪುರ್, ಸೋನೆಪುರ, ಬಲಾಂಗೀರ್, ಕಲಹಾಂಡಿ, ನುವಾಪಡಾ ಹಾಗೂ ನಬರಂಗಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿಯಲ್ಲಿದ್ದು, ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಪ್ರವಾಹ ಪರಿಸ್ಥಿತಿ ಇನ್ನಷ್ಟು ಬದಲಾಗುವ ಸಾಧ್ಯತೆ ಇರುವುದರಿಂದ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Share This Article