₹1.78 ಲಕ್ಷ ಕೋಟಿ ರಕ್ಷಣಾ ಉತ್ಪಾದನೆ: ಭಾರತ ಹೊಸ ದಾಖಲೆ ನಿರ್ಮಿಸಿದೆ ಎಂದ ರಾಜನಾಥ್ ಸಿಂಗ್

1 Min Read
1 Min Read

ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆ ದಾಖಲೆಯ ಮಟ್ಟವಾದ ₹1.78 ಲಕ್ಷ ಕೋಟಿ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈ ಮೂಲಕ ದೇಶದ ರಕ್ಷಣಾ ಉತ್ಪಾದನಾ ವಲಯ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಾಜನಾಥ್ ಸಿಂಗ್, ಹಿಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ಉತ್ಪಾದನೆ ₹1.54 ಲಕ್ಷ ಕೋಟಿ ಇದ್ದು, ಪ್ರಸ್ತುತ ವರ್ಷದಲ್ಲಿ ಅದು 15.6 ಶೇಕಡಾ ಹೆಚ್ಚಳ ದಾಖಲಿಸಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, 2020-21ರಲ್ಲಿ ₹84 ಸಾವಿರ ಕೋಟಿಗೂ ಹೆಚ್ಚು ಇದ್ದ ಉತ್ಪಾದನೆ ಇದೀಗ 110 ಶೇಕಡಕ್ಕಿಂತ ಹೆಚ್ಚಿನ ಏರಿಕೆ ಕಂಡಿದೆ ಎಂದು ವಿವರಿಸಿದ್ದಾರೆ.

ದೇಶೀಯ ರಕ್ಷಣಾ ಉತ್ಪಾದನೆಯು 2013-14ರಲ್ಲಿ ₹4,746 ಕೋಟಿಯಾಗಿದ್ದರೆ, ಇದೀಗ ಅದು ಸುಮಾರು ನಾಲ್ಕು ಪಟ್ಟು ಹೆಚ್ಚಳ ಕಂಡಿರುವುದು ಆತ್ಮನಿರ್ಭರ ಭಾರತದ ಗುರಿಯತ್ತದ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಕಂಡುಬಂದ ಈ ಗಮನಾರ್ಹ ಬೆಳವಣಿಗೆಗೆ ರಕ್ಷಣಾ ಉತ್ಪಾದನಾ ಇಲಾಖೆ ಸೇರಿದಂತೆ ವಿವಿಧ ಪಾಲುದಾರರ ಸಮೂಹಿಕ ಪ್ರಯತ್ನವೇ ಕಾರಣ ಎಂದು ಸಚಿವರು ಶ್ಲಾಘಿಸಿದ್ದಾರೆ. ಈ ಸಾಧನೆ ದೇಶದ ರಕ್ಷಣಾ ಕೈಗಾರಿಕಾ ಸಾಮರ್ಥ್ಯ ನಿರಂತರವಾಗಿ ವಿಸ್ತರಿಸುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದಿದ್ದಾರೆ.

ಸರ್ಕಾರದ ನಿರಂತರ ನೀತಿ ಬೆಂಬಲ, ಹೊಸ ಯೋಜನೆಗಳು, ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆ ಹಾಗೂ ರಕ್ಷಣಾ ಉತ್ಪನ್ನಗಳ ರಫ್ತು ಸಾಮರ್ಥ್ಯದ ವೃದ್ಧಿಯಿಂದ ಮುಂದಿನ ವರ್ಷಗಳಲ್ಲೂ ಈ ಕ್ಷೇತ್ರ ಮತ್ತಷ್ಟು ವೇಗವಾಗಿ ಬೆಳೆಯಲಿದೆ ಎಂಬ ವಿಶ್ವಾಸವನ್ನು ರಾಜನಾಥ್ ಸಿಂಗ್ ವ್ಯಕ್ತಪಡಿಸಿದ್ದಾರೆ.

Share This Article
Leave a Comment