ರಾಯ್ಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಛತ್ತೀಸ್ಗಢದ ಹಲವು ಜಿಲ್ಲೆಗಳಲ್ಲಿ ನದಿಗಳು ಮತ್ತು ಹೊಳೆಗಳು ಉಕ್ಕಿ ಹರಿಯುತ್ತಿದ್ದು, ಅನೇಕ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿತೀರ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಗರಿಯಾಬಂದ್ ಜಿಲ್ಲೆಯ ಉದಂತಿ ಪ್ರದೇಶದ ಅಮ್ಲಿ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಪ್ರಬಲ ನೀರಿನ ಹರಿವಿನಿಂದ ಕೊಚ್ಚಿಹೋಗಿದೆ. ಈ ಸೇತುವೆ ಛತ್ತೀಸ್ಗಢ ಮತ್ತು ಒಡಿಶಾವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ನಿರ್ಮಾಣವಾಗುತ್ತಿತ್ತು.
ದುರ್ಗ್ ಜಿಲ್ಲೆಯಲ್ಲಿ ಶಿವನಾಥ್ ನದಿಯ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದ್ದು, ಮಹಾನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮವಾಗಿ ಸಕ್ತಿ, ಅರಂಗ್ ಹಾಗೂ ಸುತ್ತಮುತ್ತಲಿನ ನದಿತೀರದ ಹಲವು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.
ಅರಂಗ್ನ ನಿಸ್ದಾ ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ 42 ಕುಟುಂಬಗಳನ್ನು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಇದರ ಜೊತೆಗೆ ನಾರಾಯಣಪುರ, ಕೊಂಡಗಾಂವ್, ಕಾಂಕೇರ್, ದಾಂತೇವಾಡಾ ಮತ್ತು ಬಲೋದ್ ಜಿಲ್ಲೆಗಳಲ್ಲೂ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ.


