ರೇಷನ್ ವ್ಯವಸ್ಥೆಯ ಅಕ್ರಮಗಳ ಕಥೆ ಹೇಳುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’; ಟ್ರೈಲರ್ ಬಿಡುಗಡೆ

2 Min Read
2 Min Read

ಕುಮಾರ್ ಬಂಗಾರಪ್ಪ ಮತ್ತು ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು, ಚಿತ್ರವು ಜುಲೈ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಚಿತ್ರದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಹಿರಿಯ ರಾಜಕಾರಣಿ ಎಲ್.ಆರ್. ಶಿವರಾಮೇಗೌಡ, ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಗಾಯಕಿ ಶಮಿತಾ ಮಲ್ನಾಡ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು.

ಶೀರ್ಷಿಕೆಗೆ ತಕ್ಕಂತೆ, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರವು ಸಾರ್ವಜನಿಕ ವಿತರಣೆ ವ್ಯವಸ್ಥೆ (PDS), ನ್ಯಾಯಬೆಲೆ ಅಂಗಡಿಗಳ ಕಾರ್ಯವೈಖರಿ, ಜನರು ಎದುರಿಸುವ ಸಮಸ್ಯೆಗಳು ಹಾಗೂ ವ್ಯವಸ್ಥೆಯಲ್ಲಿರುವ ಎನ್ನಲಾದ ಅಕ್ರಮಗಳನ್ನು ಕಥಾವಸ್ತುವಾಗಿಸಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಬಡವರ ಆಹಾರ ಭದ್ರತೆಗಾಗಿ ರೂಪಿಸಲಾದ ರೇಷನ್ ವ್ಯವಸ್ಥೆಯ ಅನುಷ್ಠಾನದಲ್ಲಿ ಕಂಡುಬರುವ ಲೋಪದೋಷಗಳನ್ನು ಚಿತ್ರ ಪರಿಣಾಮಕಾರಿಯಾಗಿ ತೆರೆದಿಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ಕುಮಾರ್ ಬಂಗಾರಪ್ಪ ಮಾತನಾಡಿ, “ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಮತ್ತು ರೇಷನ್ ವಿತರಣೆ ವ್ಯವಸ್ಥೆಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ದೇಶದ ಮೊದಲ ಸಿನಿಮಾ ಇದಾಗಿದೆ. ಗ್ರಾಮೀಣ ಹಿನ್ನೆಲೆಯ ಈ ಚಿತ್ರ ಮನರಂಜನೆಯೊಂದಿಗೆ ಅರ್ಥಪೂರ್ಣ ಸಾಮಾಜಿಕ ಸಂದೇಶವನ್ನೂ ನೀಡಲಿದೆ. ಬಹಳ ದಿನಗಳ ಬಳಿಕ ಸಾಮಾಜಿಕ ಕಾಳಜಿಯುಳ್ಳ ಚಿತ್ರದಲ್ಲಿ ನಟಿಸಿರುವುದು ಸಂತಸ ತಂದಿದೆ” ಎಂದು ಹೇಳಿದರು.

ನಟಿ ರಾಗಿಣಿ ದ್ವಿವೇದಿ, ಈ ಚಿತ್ರದಲ್ಲಿ ‘ಪಾರ್ವತಿ’ ಎಂಬ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಮೊದಲ ಬಾರಿಗೆ ನೈಜ ಗ್ರಾಮೀಣ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಮಂಡ್ಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದ ಚಿತ್ರೀಕರಣ ಹೊಸ ಅನುಭವ ನೀಡಿತು” ಎಂದು ಹೇಳಿದರು.

ಜಯಶಂಕರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್ ನಿರ್ಮಿಸಿರುವ ಈ ಚಿತ್ರವನ್ನು ಸಾತ್ವಿಕ್ ಪವನ್ ಕುಮಾರ್ ನಿರ್ದೇಶಿಸಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.

ಸುಮಾರು 52 ದಿನಗಳ ಕಾಲ ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಜುಲೈ 31ರಂದು ಪ್ರೇಕ್ಷಕರ ಮುಂದೆ ಬರಲಿದೆ.

Share This Article