ಭಾರತೀಯ ಹವಾಮಾನ ಇಲಾಖೆ (IMD) ಇಂದು ಗುಜರಾತ್ ಹಾಗೂ ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಅತಿ ಭಾರೀ ಮಳೆಯ ಹಿನ್ನೆಲೆ ‘ರೆಡ್ ಅಲರ್ಟ್’ ಘೋಷಿಸಿದೆ. ಈ ಪ್ರದೇಶಗಳಲ್ಲಿ ಭಾರೀದಿಂದ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಇದರ ಜೊತೆಗೆ ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಕೊಂಕಣ, ಗೋವಾ, ಮಣಿಪುರ, ಮಿಜೋರಾಂ, ತ್ರಿಪುರ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಭಾನುವಾರದವರೆಗೆ ಅರುಣಾಚಲ ಪ್ರದೇಶ, ಮೇಘಾಲಯ, ಅಸ್ಸಾಂ, ಗಂಗಾ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಛತ್ತೀಸ್ಗಢ, ಒಡಿಶಾ, ತೆಲಂಗಾಣ, ಕರ್ನಾಟಕ, ಕೇರಳ, ಮಾಹೆ, ವಿದರ್ಭ, ಸೌರಾಷ್ಟ್ರ, ಕಚ್, ಪಶ್ಚಿಮ ರಾಜಸ್ಥಾನ, ಪಂಜಾಬ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಇದಲ್ಲದೆ ಸಿಕ್ಕಿಂ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಗುಜರಾತ್, ಕರಾವಳಿ ಆಂಧ್ರಪ್ರದೇಶ, ರಾಯಲಸೀಮೆ, ತಮಿಳುನಾಡು, ಪುದುಚೇರಿ, ಕಾರೈಕಲ್ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಮುಂದಿನ ಎರಡು-ಮೂರು ದಿನಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಗುಜರಾತ್ನಲ್ಲಿ ಮಳೆಯ ಆರ್ಭಟ
ದಕ್ಷಿಣ ಹಾಗೂ ಮಧ್ಯ ಗುಜರಾತ್ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಹಲವು ರಸ್ತೆಗಳನ್ನು ಮುಚ್ಚಲಾಗಿದೆ. ವಿಶೇಷವಾಗಿ ಸುರತ್ ಮತ್ತು ವಲ್ಸಾಡ್ ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಗಳು ತೀವ್ರಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಳೆಪೀಡಿತ ಗುಜರಾತ್ಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಪರಿಸ್ಥಿತಿಯ ಮೇಲ್ವಿಚಾರಣೆಗೆ ಹಿರಿಯ ಸಚಿವರು ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿಯ ಪ್ರಕಾರ, ಸುರತ್ ಜಿಲ್ಲೆಯ ಉಮರ್ಪಾಡಾದಲ್ಲಿ ಕೇವಲ ಆರು ಗಂಟೆಗಳಲ್ಲಿ 11 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ವಲ್ಸಾಡ್ ಜಿಲ್ಲೆಯ ಉಮರ್ಗಾಂವ್ನಲ್ಲಿ ಸುಮಾರು 10 ಇಂಚು, ಭರುಚ್ನ ನೇತ್ರಾಂಗ್, ವಲ್ಸಾಡ್ನ ಪಾರ್ಡಿ ಹಾಗೂ ನವಸಾರಿಯ ಖೇರ್ಗಾಂವ್ ಪ್ರದೇಶಗಳಲ್ಲಿ 6 ಇಂಚಿಗೂ ಅಧಿಕ ಮಳೆ ಸುರಿದಿದೆ.
ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ವಲ್ಸಾಡ್ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಮತ್ತು ಕೈಗಾರಿಕಾ ಘಟಕಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಅಹಮದಾಬಾದ್ನಲ್ಲಿ ಬೆಳಗ್ಗಿನ ಜಾವ ಸುರಿದ ಭಾರೀ ಮಳೆಯಿಂದ ಪ್ರಮುಖ ಅಂಡರ್ಪಾಸ್ಗಳು ಜಲಾವೃತಗೊಂಡಿದ್ದು, ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೀರು ಹೊರಹಾಕುವ ಕಾರ್ಯಾಚರಣೆ ಮುಂದುವರಿದಿದೆ.
ಎನ್ಡಿಆರ್ಎಫ್ (NDRF) ತಂಡಗಳು ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ. ಸುರತ್ನಲ್ಲಿ ಮಾತ್ರ 2,200ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗಾಂಧಿನಗರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಿಂದ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಭಾರೀ ಮಳೆಯೊಂದಿಗೆ ಗುಡುಗು ಮತ್ತು ಬಿರುಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.


