ಕಾಮನ್‌ವೆಲ್ತ್ ಕ್ರೀಡಾ ಸಚಿವರ ಸಭೆಯ ಅಂಗವಾಗಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋನಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್‌ಸುಖ್ ಮಾಂಡವಿಯಾ ಅವರು ಕಾಮನ್‌ವೆಲ್ತ್‌ನ ಪ್ರಧಾನ ಕಾರ್ಯದರ್ಶಿ-ಆಯ್ಕೆಯಾದ ಶಿರ್ಲಿ ಅಯೋರ್ಕರ್ ಬೋಟ್‌ಚ್ವೇ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ಸಭೆಯಲ್ಲಿ ಡಾ. ಮಾಂಡವಿಯಾ ಅವರು ಭಾರತದ ಕ್ರೀಡಾ ಕ್ಷೇತ್ರದಲ್ಲಿ ಜಾರಿಗೊಂಡಿರುವ ಮಹತ್ವದ ಸುಧಾರಣೆಗಳಾದ ‘ಖೇಲೋ ಭಾರತ ನೀತಿ’ ಹಾಗೂ ‘ಅಸ್ಮಿತಾ ಲೀಗ್‌ಗಳು’ ಕುರಿತು ವಿವರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಈ ಎರಡೂ ಯೋಜನೆಗಳು ದೇಶದಲ್ಲಿ ತಳಮಟ್ಟದ ಕ್ರೀಡೆಗೆ ಉತ್ತೇಜನ ನೀಡುವುದರ ಜೊತೆಗೆ ಮಹಿಳಾ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದರು.
ಇದೇ ವೇಳೆ ಕಾಮನ್‌ವೆಲ್ತ್ ರಾಷ್ಟ್ರಗಳ ನಡುವಿನ ಕ್ರೀಡಾ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವುದು, ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುವ ಕುರಿತು ಉಭಯ ನಾಯಕರು ಅಭಿಪ್ರಾಯ ವಿನಿಮಯ ನಡೆಸಿದರು.
2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆತಿಥ್ಯ ವಹಿಸಲು ಭಾರತ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ, ಈ ಸಭೆ ಮಹತ್ವದ್ದಾಗಿದೆ ಎಂದು ತಿಳಿದುಬಂದಿದೆ.


