47 ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇಂಟರ್‌ಪೋಲ್ ಮಹಾಸಮ್ಮೇಳನ: AI ಆಧಾರಿತ ಮೂರು ಅತ್ಯಾಧುನಿಕ ಕೇಂದ್ರಗಳಿಗೆ ಅಮಿತ್ ಶಾ ಚಾಲನೆ

1 Min Read
1 Min Read

ಗಾಂಧಿನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಗುಜರಾತಿನ ಗಾಂಧಿನಗರದಲ್ಲಿರುವ ರಾಷ್ಟ್ರೀಯ ಫೊರೆನ್ಸಿಕ್ ವಿಜ್ಞಾನ ವಿಶ್ವವಿದ್ಯಾಲಯ (NFSU)ದಲ್ಲಿ ನಡೆಯಲಿರುವ 11ನೇ ಇಂಟರ್‌ಪೋಲ್ ಡಿಜಿಟಲ್ ಫೊರೆನ್ಸಿಕ್ ಎಕ್ಸ್‌ಪರ್ಟ್ ಗ್ರೂಪ್ ಸಭೆ, ಪ್ರಥಮ ಅಂತರರಾಷ್ಟ್ರೀಯ ಇನ್ವೆಸ್ಟಿಗೇಟರ್ಸ್ ಕ್ರೈಮ್ ಸ್ಪರ್ಧೆ ಹಾಗೂ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

2022ರ ಬಳಿಕ ಎರಡನೇ ಬಾರಿ ಈ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮಕ್ಕೆ ಭಾರತ ಆತಿಥ್ಯ ವಹಿಸಿದೆ. ಈ ಸಭೆಯಲ್ಲಿ 47 ದೇಶಗಳ ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಉಪ ಮುಖ್ಯಮಂತ್ರಿ ಹರ್ಷ್ ಸಂಘವಿ ಕೂಡ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಕೃತಕ ಬುದ್ಧಿಮತ್ತೆ (AI) ಆಧಾರಿತ ಹಣಕಾಸು ಅಪರಾಧ ತನಿಖೆ, ಅಪರಾಧ ಸ್ಥಳ ನಿರ್ವಹಣೆ ಹಾಗೂ ಭಾರತದ ಮೊದಲ ಮೀಡಿಯಾ ಫೊರೆನ್ಸಿಕ್ ಕೇಂದ್ರ ಸೇರಿದಂತೆ ಮೂರು ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ಗಳನ್ನು ಉದ್ಘಾಟಿಸಲಿದ್ದಾರೆ.

ಇದೇ ವೇಳೆ, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಏಷ್ಯಾದ ಮೊದಲ ಸ್ವದೇಶಿ ಸೈಬರ್ ಫೊರೆನ್ಸಿಕ್ ಇನ್ವೆಸ್ಟಿಗೇಷನ್ ವ್ಯಾನ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಮೊಬೈಲ್ ಪ್ರಯೋಗಾಲಯವು ಘಟನೆ ನಡೆದ ಸ್ಥಳದಲ್ಲೇ ಡಿಜಿಟಲ್ ಸಾಕ್ಷ್ಯಗಳನ್ನು ತಕ್ಷಣವೇ ಸಂಗ್ರಹಿಸಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಾರ್ಯಕ್ರಮದಲ್ಲಿ ಗೂಗಲ್ ಸೇರಿದಂತೆ 30ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಂಪನಿಗಳು ಸೈಬರ್ ಭದ್ರತೆ ಹಾಗೂ ಡಿಜಿಟಲ್ ಫೊರೆನ್ಸಿಕ್ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ.

ಇದೇ ದಿನ, ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯದ ಅಂಗವಾಗಿ ಅಮಿತ್ ಶಾ ಅವರು ದಹೇಗಾಂವ್‌ಗೆ ಭೇಟಿ ನೀಡಿ, ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಎಪಿಎಂಸಿ (APMC) ತರಕಾರಿ ಉಪ ಮಾರುಕಟ್ಟೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ.

Share This Article