ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಮಾನವ ಬಾಹ್ಯಾಕಾಶ ಮಿಷನ್ಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗಗನಯಾನದ ಕ್ರೂ ಮಾಡ್ಯೂಲ್‌ಗೆ ಸಂಬಂಧಿಸಿದ ಮೂರು ಪ್ರಮುಖ ವ್ಯವಸ್ಥೆಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಮೊದಲ ಪರೀಕ್ಷೆಯಲ್ಲಿ ಕ್ರೂ ಮಾಡ್ಯೂಲ್ ಅಪ್‌ರೈಟಿಂಗ್ ಸಿಸ್ಟಮ್ (Crew Module Uprighting System) ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಯಿತು. ಸಮುದ್ರದಲ್ಲಿ ಇಳಿದ ಬಳಿಕ ಕ್ರೂ ಮಾಡ್ಯೂಲ್ ಸ್ವಯಂಚಾಲಿತವಾಗಿ ನೇರ ಸ್ಥಿತಿಗೆ ಮರಳುವಂತೆ ಮಾಡುವ ಈ ವ್ಯವಸ್ಥೆಯು ಗಗನಯಾತ್ರಿಗಳ ಸುರಕ್ಷತೆಗೆ ಅತ್ಯಂತ ಪ್ರಮುಖವಾಗಿದೆ. ಸಂಗ್ರಹಿತ ಶೀತ ಅನಿಲ (Stored Cold Gas) ತಂತ್ರಜ್ಞಾನವನ್ನು ಆಧರಿಸಿದ ಈ ವ್ಯವಸ್ಥೆ ಸುರಕ್ಷಿತ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದೆ.
ಎರಡನೇ ಪರೀಕ್ಷೆಯಲ್ಲಿ ಕ್ರೂ ಮಾಡ್ಯೂಲ್ ಮತ್ತು ಸರ್ವಿಸ್ ಮಾಡ್ಯೂಲ್ ನಡುವಿನ ಅಂಬಿಲಿಕಲ್ ಸಂಪರ್ಕ (Umbilical Mechanism) ಬೇರ್ಪಡಿಸುವ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಕ್ರೂ ಮಾಡ್ಯೂಲ್‌ನಲ್ಲಿ ಗಗನಯಾತ್ರಿಗಳು ಪ್ರಯಾಣಿಸುತ್ತಾರೆ. ಸರ್ವಿಸ್ ಮಾಡ್ಯೂಲ್ ವಿದ್ಯುತ್ ಪೂರೈಕೆ ಹಾಗೂ ಪ್ರೊಪಲ್ಷನ್ ವ್ಯವಸ್ಥೆಯನ್ನು ಒದಗಿಸುತ್ತದೆ.
ಈ ಸಂಪರ್ಕ ವ್ಯವಸ್ಥೆಯಲ್ಲಿ CSU-1 ಮತ್ತು CSU-2 ಎಂಬ ಎರಡು ಘಟಕಗಳಿವೆ. ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವ ಸಂದರ್ಭದಲ್ಲಿ ಮೊದಲು CSU-1 ಸಂಪರ್ಕ ಕಡಿತಗೊಳ್ಳುತ್ತದೆ. ನಂತರ ಮರುಪ್ರವೇಶಕ್ಕೂ ಮುನ್ನ CSU-2 ಕೂಡ ಸುರಕ್ಷಿತವಾಗಿ ಬೇರ್ಪಡುತ್ತದೆ. ಈ ಪರೀಕ್ಷೆಯಲ್ಲಿ ಅನುಕರಿಸಿದ (Simulated) ಕ್ರೂ ಮಾಡ್ಯೂಲ್‌ನಿಂದ CSU-2 ಯಶಸ್ವಿಯಾಗಿ ಪ್ರತ್ಯೇಕಗೊಂಡಿದ್ದು, ಕ್ರೂ ಮಾಡ್ಯೂಲ್‌ನ ರಚನಾತ್ಮಕ ಸ್ಥಿರತೆಯೂ ದೃಢಪಟ್ಟಿದೆ.
ಮೂರನೇ ಪರೀಕ್ಷೆಯಲ್ಲಿ ಅಪೆಕ್ಸ್ ಕವರ್ (Apex Cover) ಬೇರ್ಪಡಿಸುವ ವೇಳೆ ಕ್ರೂ ಮಾಡ್ಯೂಲ್‌ನ ರಚನಾತ್ಮಕ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು. ಅಪೆಕ್ಸ್ ಕವರ್ ಮಿಷನ್ ಅವಧಿಯಲ್ಲಿ ಪ್ಯಾರಾಶೂಟ್ ಹಾಗೂ ಅದರ ಸಂಬಂಧಿತ ವ್ಯವಸ್ಥೆಗಳನ್ನು ರಕ್ಷಿಸುತ್ತದೆ. ಪ್ಯಾರಾಶೂಟ್ ತೆರೆಯುವ ಮೊದಲು ಈ ಕವರ್ ಸುರಕ್ಷಿತವಾಗಿ ಬೇರ್ಪಡುವುದು ಅತ್ಯಗತ್ಯವಾಗಿದ್ದು, ಪರೀಕ್ಷೆಯಲ್ಲಿ ಈ ವ್ಯವಸ್ಥೆಯೂ ಯಶಸ್ವಿಯಾಗಿದೆ.
ಈ ಮೂರು ಪರೀಕ್ಷೆಗಳ ಯಶಸ್ಸು ಭಾರತದ ಮೊದಲ ಮಾನವ ಬಾಹ್ಯಾಕಾಶ ಮಿಷನ್ ಗಗನಯಾನದ ಸಿದ್ಧತೆಯಲ್ಲಿ ಮತ್ತೊಂದು ಮಹತ್ವದ ಸಾಧನೆಯಾಗಿ ಪರಿಗಣಿಸಲಾಗಿದೆ.


