ಉತ್ತರಾಖಂಡದಿಂದ ಇರಾಕ್‌ಗೆ ಮೊದಲ ಬಾರಿಗೆ ಫ್ರೋಜನ್ ಫ್ರೆಂಚ್ ಫ್ರೈಸ್ ರಫ್ತು
ಭಾರತದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದ್ದು, ಉತ್ತರಾಖಂಡದ ಕಾಶೀಪುರದಿಂದ ಮೊದಲ ಬಾರಿಗೆ 24 ಮೆಟ್ರಿಕ್ ಟನ್ ಫ್ರೋಜನ್ ಫ್ರೆಂಚ್ ಫ್ರೈಸ್ ಅನ್ನು ಇರಾಕ್‌ಗೆ ರಫ್ತು ಮಾಡಲಾಗಿದೆ.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಈ ರಫ್ತು ಪ್ರಕ್ರಿಯೆಗೆ ನೆರವು ನೀಡಿದ್ದು, ವಿರುನ್ ಗ್ಲೋಬಲ್ ಟ್ರೇಡ್ ಪ್ರೈವೇಟ್ ಲಿಮಿಟೆಡ್ ಈ ಸರಕು ಸಾಗಣೆಯನ್ನು ನಿರ್ವಹಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಾರ, ಈ ರಫ್ತು ಉತ್ತರಾಖಂಡದಿಂದ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ರಫ್ತಿಗೆ ಹೊಸ ಉತ್ತೇಜನ ನೀಡುವುದರ ಜೊತೆಗೆ, ಭಾರತದ ಸಂಸ್ಕರಿತ ಆಹಾರ ರಫ್ತು ವಲಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.
ಎಪೆಡಾ ಅಧ್ಯಕ್ಷ ಅಭಿಷೇಕ್ ದೇವ್ ಮಾತನಾಡಿ, ಉತ್ತರಾಖಂಡದಂತಹ ಸಮುದ್ರ ಸಂಪರ್ಕವಿಲ್ಲದ (Landlocked) ರಾಜ್ಯಗಳಿಗೆ ಸಾರಿಗೆ ವೆಚ್ಚವು ರಫ್ತು ಸ್ಪರ್ಧಾತ್ಮಕತೆಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಈ ಸವಾಲನ್ನು ಎದುರಿಸಲು ಉತ್ತರಾಖಂಡ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ರಾಜ್ಯ ಕೃಷಿ ರಫ್ತು ನೀತಿ ರೂಪಿಸುವ ಹಾಗೂ ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಈ ನೀತಿಯಲ್ಲಿ ಸಾರಿಗೆ ಸಹಾಯಧನ ಸೇರಿದಂತೆ ರಫ್ತುದಾರರಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ ಕಲ್ಪಿಸುವ ಕ್ರಮಗಳಿಗೂ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.


