ಸಾಕಾ ಹ್ಯಾಟ್ರಿಕ್ ಮ್ಯಾಜಿಕ್; ಫ್ರಾನ್ಸ್ ವಿರುದ್ಧ 6-4 ಜಯ ಸಾಧಿಸಿ ಕಂಚಿನ ಪದಕ ಗೆದ್ದ ಇಂಗ್ಲೆಂಡ್

1 Min Read
1 Min Read

ಫಿಫಾ ವಿಶ್ವಕಪ್ 2026ರ ಮೂರನೇ ಸ್ಥಾನಕ್ಕಾಗಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್, ಫ್ರಾನ್ಸ್ ತಂಡವನ್ನು 6-4 ಗೋಲುಗಳಿಂದ ಮಣಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಅಭಿಮಾನಿಗಳಿಗೆ ಗೋಲುಗಳ ಮಳೆ ಸುರಿಸಿದ ರೋಚಕ ಕ್ಷಣಗಳನ್ನು ನೀಡಿತು.

ಇಂಗ್ಲೆಂಡ್ ಪರ ಮಿಂಚಿನ ಪ್ರದರ್ಶನ ನೀಡಿದ ಬುಕಾಯೊ ಸಾಕಾ ಹ್ಯಾಟ್ರಿಕ್ (37ನೇ, ಮೊದಲಾರ್ಧದ ಹೆಚ್ಚುವರಿ ಸಮಯ ಹಾಗೂ 87ನೇ ನಿಮಿಷದ ಪೆನಾಲ್ಟಿ) ದಾಖಲಿಸಿ ತಂಡದ ಗೆಲುವಿನ ರೂವಾರಿಯಾದರು. ಇದರೊಂದಿಗೆ, 1966ರ ವಿಶ್ವಕಪ್ ಫೈನಲ್‌ನಲ್ಲಿ ಸರ್ ಜೆಫ್ ಹರ್ಸ್ಟ್ ಬಳಿಕ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಹ್ಯಾಟ್ರಿಕ್ ದಾಖಲಿಸಿದ ಎರಡನೇ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಸಾಕಾ ಪಾತ್ರರಾದರು.

ಈ ಪಂದ್ಯದಲ್ಲಿ ಒಟ್ಟು 10 ಗೋಲುಗಳು ದಾಖಲಾಗಿದ್ದು, 1982ರಲ್ಲಿ ಹಂಗೇರಿ ಎಲ್‌ ಸಾಲ್ವಡಾರ್ ವಿರುದ್ಧ 10-1 ಗೋಲುಗಳ ಜಯ ಸಾಧಿಸಿದ ಬಳಿಕ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲುಗಳು ದಾಖಲಾದ ಪಂದ್ಯ ಎಂಬ ದಾಖಲೆ ಬರೆಯಿತು. ಅಲ್ಲದೆ, ವಿಶ್ವಕಪ್ ಇತಿಹಾಸದಲ್ಲೇ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲುಗಳು ದಾಖಲಾಗಿದ ಪಂದ್ಯವೂ ಇದಾಗಿದೆ.

ಇತ್ತ ಫ್ರಾನ್ಸ್‌ನ ನಾಯಕ ಕಿಲಿಯನ್ ಎಂಬಾಪೆ ದ್ವಿತೀಯಾರ್ಧದಲ್ಲಿ ಎರಡು ಗೋಲುಗಳನ್ನು ದಾಖಲಿಸುವ ಮೂಲಕ ವಿಶ್ವಕಪ್‌ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 22ಕ್ಕೆ ಏರಿಸಿಕೊಂಡಿದ್ದಾರೆ. ಇದರೊಂದಿಗೆ, ಲಿಯೋನೆಲ್ ಮೆಸ್ಸಿ ಅವರ ವಿಶ್ವಕಪ್ ಗೋಲುಗಳ ದಾಖಲೆಯನ್ನು ಹಿಂದಿಕ್ಕಿರುವ ಎಂಬಾಪೆ, ಈ ಟೂರ್ನಿಯಲ್ಲಿ ಒಟ್ಟು 10 ಗೋಲುಗಳೊಂದಿಗೆ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೆಸ್ಸಿ 8 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇಂದು ಅರ್ಜೆಂಟೀನಾ-ಸ್ಪೇನ್ ಫೈನಲ್

ಇದೇ ವೇಳೆ, ಫಿಫಾ ವಿಶ್ವಕಪ್ 2026ರ ಚಾಂಪಿಯನ್ ಪಟ್ಟಕ್ಕಾಗಿ ಅರ್ಜೆಂಟೀನಾ ಮತ್ತು ಸ್ಪೇನ್ ತಂಡಗಳು ಇಂದು ನ್ಯೂಯಾರ್ಕ್–ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯವು ರಾತ್ರಿ 12:30ಕ್ಕೆ ಆರಂಭವಾಗಲಿದೆ.

Share This Article